ಸಿದ್ದರಾಮಯ್ಯಗೆ ರಾಜ್ಯಪಾಲ ಗೆಹ್ಲೋಟ್ ನೋಟಿಸ್ ತಿರಸ್ಕರಿಸಲು ನಿರ್ಣಯ; BJP ತಂತ್ರಕ್ಕೆ ಸಿದ್ದು ಪ್ರತಿತಂತ್ರ; ಬೆಂಗಳೂರಿನಲ್ಲಿ ಅಜಿತ್ ಬರ್ಬರ ಹತ್ಯೆ! ಇವು ಇಂದಿನ ಪ್ರಮುಖ ಸುದ್ದಿಗಳು 01-08-24

ಸಿದ್ದರಾಮಯ್ಯಗೆ ರಾಜ್ಯಪಾಲ ಗೆಹ್ಲೋಟ್ ನೋಟಿಸ್ ತಿರಸ್ಕರಿಸಲು ನಿರ್ಣಯ; BJP ತಂತ್ರಕ್ಕೆ ಸಿದ್ದು ಪ್ರತಿತಂತ್ರ; ಬೆಂಗಳೂರಿನಲ್ಲಿ ಅಜಿತ್ ಬರ್ಬರ ಹತ್ಯೆ! ಇವು ಇಂದಿನ ಪ್ರಮುಖ ಸುದ್ದಿಗಳು 01-08-24

1. ಸಿದ್ದರಾಮಯ್ಯಗೆ ರಾಜ್ಯಪಾಲರ ನೋಟಿಸ್ ವಿರುದ್ಧ ತಿರಸ್ಕರಿಸಲು ನಿರ್ಣಯ

ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ನೀಡಿರುವುದಕ್ಕೆ ಇಂದು ರಾಜ್ಯ ಸಚಿವ ಸಂಪುಟ ಸಭೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ನೋಟಿಸ್ ವಿರುದ್ಧ ಕಾನೂನು ಹೋರಾಟ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆ ಬಳಿಕ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರ ನೋಟಿಸ್ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ನೋಟಿಸ್ ತಿರಸ್ಕರಿಸಲು ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

2. ಸಂಪುಟ ಸಹೋದ್ಯೋಗಿಗಳ ಜೊತೆ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್: BJP ತಂತ್ರಕ್ಕೆ ಪ್ರತಿತಂತ್ರ

ಇದಕ್ಕೂ ಮುನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಸಂಪುಟ ಸಹೋದ್ಯೋಗಿಗಳ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸಿಎಂ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸುವ ವಿಪಕ್ಷಗಳ ವಿರುದ್ಧ ತಂತ್ರ ರೂಪಿಸಿದ್ದಾರೆ. ರಾಜ್ಯಪಾಲರು ಮುಡಾ ಹಗರಣದ ಬಗ್ಗೆ ಮತ್ತೆ ವರದಿ ಕೇಳಿರುವುದು ಮತ್ತು ಅವರ ಮುಂದಿನ ನಡೆ, ಕಾನೂನು ಹೋರಾಟ, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚೆ ನಡೆದಿದ್ದು, ಬಿಜೆಪಿಯವರ ಪಾದಯಾತ್ರೆಯನ್ನು ಹೇಗೆ ಮಟ್ಟಹಾಕಬೇಕು ಮತ್ತು ಅವರ ಹಗರಣಗಳ ಬಗ್ಗೆಯೂ ಪಟ್ಟಿ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆಯಾಗಿದೆ.

3. ಶಿರೂರು ಗುಡ್ಡಕುಸಿತದ ನಂತರ ಸಂಚಾರ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ-66 ವಾಹನ ಸಂಚಾರಕ್ಕೆ ಮುಕ್ತ

ಶಿರೂರು ಗುಡ್ಡಕುಸಿತದ ನಂತರ ಸಂಚಾರ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ-66 ಅನ್ನು ಎರಡು ವಾರಗಳ ಬಳಿಕ ಮತ್ತೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ. ಈ ಸಂಬಂಧ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು, ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರಿಗೆ ಪತ್ರ ಬರೆದಿದ್ದು, ಗುರುವಾರದೊಳಗೆ ರಾಷ್ಟ್ರಿಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಶಿರೂರಿನಲ್ಲಿ ಗುಡ್ಡ ಕುಸಿತದ ನಂತರ NH-66 ಸಂಪೂರ್ಣ ಬಂದ್ ಆಗಿತ್ತು. ಮತ್ತೊಂದೆಡೆ, ವಯನಾಡು ಭೂಕುಸಿತದಲ್ಲಿ ಕನ್ನಡಿಗರು ಸಿಲುಕಿರುವುದರಿಂದ ರಾಜ್ಯ ಸಚಿವ ಸಂತೋಷ್ ಲಾಡ್ ಅವರು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ವಯನಾಡಿಗೆ ತೆರಳಿದ್ದು, ನೆರವು ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಮಧ್ಯೆ, ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡದ ಫಲ್ಗುಣಿ ಮತ್ತು ಉಡುಪಿಯ ಶಾಂಭವಿ ನದಿಗಳು ತುಂಬಿ ಹರಿಯುತ್ತಿದ್ದು ಉಡುಪಿಯ ನೆಲ್ಲಿಕಾರು ಗ್ರಾಮದಲ್ಲಿ ಮನೆ ಕುಸಿದು 56 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4. ಸೈಬರ್ ಅಪರಾಧಗಳನ್ನು ಎದುರಿಸಲು ಸಮಗ್ರ ಸೈಬರ್ ಭದ್ರತಾ ನೀತಿ 2024 ಆರಂಭ!

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳನ್ನು ಎದುರಿಸಲು ಮತ್ತು ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ರಕ್ಷಿಸಲು ಜಾಗೃತಿ, ಕೌಶಲ್ಯ ನಿರ್ಮಾಣ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ತಂತ್ರಜ್ಞಾನ ಏಕೀಕರಣವನ್ನು ಉತ್ತೇಜಿಸಲು ಸರ್ಕಾರವು ಇಂದು ಸಮಗ್ರ ಸೈಬರ್ ಭದ್ರತಾ ನೀತಿ 2024ನ್ನು ಆರಂಭಿಸಿದೆ. ರಾಜ್ಯ ಸರ್ಕಾರವು ಹೆಚ್ಚುತ್ತಿರುವ ಸೈಬರ್ ಭದ್ರತೆಯ ಪ್ರಾಮುಖ್ಯತೆಯನ್ನು ಗುರುತಿಸಿ, ನಮ್ಮ ನಾಗರಿಕರು ಮತ್ತು ಉದ್ಯಮಗಳಿಗೆ ಸುರಕ್ಷಿತ ಸೈಬರ್‌ಸ್ಪೇಸ್ ನ್ನು ಸ್ಥಾಪಿಸಲು ಈ ನೀತಿಯನ್ನು ನಿಖರವಾಗಿ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

5. ಬೆಂಗಳೂರಿನಲ್ಲಿ ಅಜಿತ್ ಎಂಬಾತನ ಬರ್ಬರ ಹತ್ಯೆ

ಬೆಂಗಳೂರಿನ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ರಶಿಲ್ಲಾರ್ ಸ್ಟ್ರೀಟ್ನಲ್ಲಿ ಹಾಡಹಗಲೇ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 27 ವರ್ಷದ ಅಜಿತ್ ಎಂಬಾತನನ್ನು ಯುವಕರ ಗುಂಪು ಹತ್ಯೆ ಮಾಡಿ ಪರಾರಿಯಾಗಿದೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜಿತ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, 2022ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದನು. ಅದೇ ವಿಚಾರಕ್ಕೆ ಕೊಲೆ ನಡೆದಿರಬಹುದು. ಸದ್ಯ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶೇಖರ್ ತಿಳಿಸಿದ್ದಾರೆ. ಮತ್ತೊಂದೆಡೆ ಆನೇಕಲ್ ಪುರಸಭಾ ಸದಸ್ಯ ಸ್ಕ್ರ್ಯಾಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕಾರ್ತಿಕ್‌ ಕಾಲಿಗೆ ಗುಂಡು ಹಾರಿಸಿ ಆನೇಕಲ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com