ನೈಟ್'ಲೈಫ್'ಗೆ BBMP ಅನುಮತಿ: ಸಿಲಿಕಾನ್ ಸಿಟಿಯಲ್ಲಿ ಇನ್ಮುಂದೆ ಮಧ್ಯರಾತ್ರಿ 1ರವರೆಗೂ ಎಲ್ಲಾ ವ್ಯಾಪಾರ ಓಪನ್!

ಇದೀಗ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಲಕ್ಷ್ಮೀ ಸಾಗರ್ ಎನ್.ಕೆ. ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ) ಆದೇಶವನ್ನು ಹೊರಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಈವರೆಗೆ ಅನಧಿಕೃತವಾಗಿ ಚಾಲ್ತಿಯಲ್ಲಿದ್ದ ನೈಟ್'ಲೈಫ್'ಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನು ಮುಂದೆ ಮಧ್ಯರಾತ್ರಿ 1 ಗಂಟೆಯವರೆಗೂ ಪಬ್, ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್‌ಗಳು ವಹಿವಾಟುಗಳ ನಡೆಸಲು ಅವಕಾಶ ನೀಡಲಾಗಿದೆ.

ನಗರದಲ್ಲಿ ರಾತ್ರಿ ವೇಳೆಯಲ್ಲೂ ವ್ಯಾಪಾರ-ವಹಿವಾಟು ಹೆಚ್ಚಿಸುವ ಉಧ್ದೇಶದೊಂದಿಗೆ 2016ರಲ್ಲಿ ಹೋಟೆಲ್, ರೆಸ್ಟೋರೆಂಟ್ ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಮೊದಲಿನ ವಾರಾಂತ್ಯದ ಎರಡು ದಿನಗಳು ಮಾತ್ರ ಅದಕ್ಕೆ ಅವಕಾಶ ನೀಡಲಾಗಿತ್ತಾದರೂ, ಜನರ ಬೇಡಿಕೆ ಹೆಚ್ಚಾದ ಕಾರಣದಿಂದಾಗಿ ವಾರದ 7 ದಿನವೂ ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು. ಆದರೆ, ವ್ಯಾಪಾರಿಗಳು ಸರ್ಕಾರ ಆದೇಶದಂತೆ ಮಧ್ಯರಾತ್ರಿವರೆಗೆ ವ್ಯಾಪಾರ ಮಾಡಲು ಸ್ಥಳೀಯ ಪೊಲೀಸರು ಅವಕಾಶ ನೀಡಿರಲಿಲ್ಲ. ಹೀಗಾಗಿ ರಾತ್ರಿ 11ರ ವೇಳೆಗೆ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುತ್ತಿದ್ದವು.

ಇದೀಗ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಲಕ್ಷ್ಮೀ ಸಾಗರ್ ಎನ್. ಕೆ. ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ) ಆದೇಶವನ್ನು ಹೊರಡಿಸಿದ್ದಾರೆ.

ಈ ಆದೇಶದ ಪ್ರಕಾರ ಸಿಎಲ್‌ 4, ಸಿಎಲ್‌ 6, ಸಿಎಲ್‌ 7, ಸಿಎಲ್‌ 7D ಲೈಸೆನ್ಸ್ ಪಡೆದ ಹೊಟೇಲ್, ಕ್ಲಬ್‌, ರೆಸ್ಟೋರೆಂಟ್‌ಗೆ ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ಹಾಗೂ ಸಿಎಲ್‌ 9 ಲೈಸೆನ್ಸ್ ಪಡೆದ ಬಾರ್‌ಗಳಿಗೆ ಬೆಳಗ್ಗೆ 10 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟಿನ ಸಮಯ ನಿಗದಿಪಡಿಸಲಾಗಿದೆ.

ಸಂಗ್ರಹ ಚಿತ್ರ
ಬೀದಿಬದಿ ವ್ಯಾಪಾರಿಗಳ ತೆರವುಗೊಳಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ ಬಿಬಿಎಂಪಿ: ವ್ಯಾಪಾರಸ್ಥರ ಆರೋಪ

2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 269 ರಲ್ಲಿ ಘೋಷಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ಮೇಲಿನ ನಿರ್ಬಂಧವನ್ನು ಮಧ್ಯಾರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ. ಜುಲೈ 06 ರಂದು ನಡೆದ ಸಭೆಯಲ್ಲಿ ಆರ್ಥಿಕ ಇಲಾಖೆ ಸಹಮತಿ ನೀಡಿದ ಹಿನ್ನೆಲೆ ವ್ಯಾಪಾರ-ವಹಿವಾಟು ವಿಸ್ತರಣೆಗೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರ ಈ ಆದೇಶವನ್ನು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ (BBHA) ಸ್ವಾಗತಿಸಿವೆ.

ಬಿಬಿಎಚ್‌ಎ ಅಧ್ಯಕ್ಷ ಪಿಸಿ ರಾವ್ ಮಾತನಾಡಿ, ವ್ಯಾಪಾರ-ವಹಿವಾಟಿನ ಸಮಯವನ್ನು 1 ಗಂಟೆಗೆ ವಿಸ್ತರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರಿಂದ ಬೆಂಗಳೂರಿನ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿರ್ಧಾರವು ಹೆಚ್ಚಿನ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಕಮಿಷನರೇಟ್ ಮಿತಿಯಲ್ಲಿ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿರಲು ಅನುಮತಿಸಲಾಗಿದೆ. ಈ ಆದೇಶದೊಂದಿಗೆ, ಬಿಬಿಎಂಪಿ ಮಿತಿಗಳಲ್ಲಿ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿರುತ್ತವೆ ಎಂದು ಹೇಳಿದ್ದಾರೆ.

ಆದರೆ, ಸರ್ಕಾರದ ಆದೇಶವನ್ನು ಕೆಲ ನೆಟ್ಟಿಗರು ವಿರೋಧಿಸಿದ್ದಾರೆ. ಇದು ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com