ಬೆಂಗಳೂರು: ಇತ್ತೀಚೆಗೆ ತೋಳ ಮಾರಾಟ ಮಾಡಲು ಯತ್ನಿಸಿದ ನೆರೆಯ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಗರದ ಅಧಿಕಾರಿಗಳು ಕಣ್ಗಾವಲು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಬೆಂಗಳೂರಿನ ಹೊರವಲಯದಲ್ಲಿ ವ್ಯಕ್ತಿಯನ್ನು ತಡೆದ ಪರಿಶೀಲನೆ ನಡೆಸಿದಾಗ ಆತನ ಬ್ಯಾಗ್ ನಲ್ಲಿ ಎರಡು ತೋಳಗಳ ಚರ್ಮ ಇರುವುದು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಆರ್ ಐ ಹೇಳಿಕೆಯಲ್ಲಿ ತಿಳಿಸಿದೆ.
ವನ್ಯಜೀವಿಗಳ ರಕ್ಷಣಾ ಕಾಯ್ದೆಯಡಿ ತೋಳಗಳನ್ನು ರಕ್ಷಿಸಲಾಗುತ್ತಿದ್ದು, ಅವುಗಳ ಚರ್ಮ ಹೊಂದುವುದು, ವ್ಯಾಪಾರ ಮಾಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಕಾಳಸಂತೆಯಲ್ಲಿ ತೋಳಗಳ ಚರ್ಮಗಳಿಗೆ ಹೆಚ್ಚಿನ ಬೇಡಿಕೆಯಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿ ಚರ್ಮವನ್ನು ವಶಪಡಿಸಿಕೊಳ್ಳಲಾಗಿದ್ದು, ತಮಿಳುನಾಡು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಮತ್ತಷ್ಟು ಮಂದಿ ಇರುವ ಸಾಧ್ಯತೆಯಿದ್ದು, ತನಿಖೆ ನಡೆಯುತ್ತಿದೆ ಎಂದು DRI ಮಾಹಿತಿ ನೀಡಿದೆ.
Advertisement