ಬೆಂಗಳೂರು: ರಸ್ತೆ ಬದಿ ಕಸ ಎಸೆದಿದ್ದಕ್ಕೆ ಬೈದ ವೃದ್ಧನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಸಿದ್ದಪ್ಪ (78) ಕೊಲೆಯಾದ ವೃದ್ಧ ವ್ಯಕ್ತಿ. ಆರೋಪಿಯನ್ನು ಪುನಿತ್ (22) ಎಂದು ಗುರ್ತಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 8.45 ರಿಂದ 9.00 ರ ನಡುವೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಿಂದ 1 ಕಿಮೀ ದೂರದಲ್ಲಿ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ಮೂಲದ ಪುನೀತ್ ರಸ್ತೆಗೆ ಕಸ ತುಂಬಿದ ಕವರ್ ಎಸೆದು, ಗುಟ್ಕಾ ಉಗಿದು ಹೋಗುತ್ತಿದ್ದ. ಇದನ್ನು ನೋಡಿದ ಸಿದ್ದಪ್ಪ ಅವರು ಪುನೀತ್ ಗೆ ಪ್ರಶ್ನಿಸಿ ಬೈದಿದ್ದಾರೆನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಂಡಾಮಂಡಲಗೊಂಡಿರುವ ಪುನೀತ್ ಹತ್ತಿರದಲ್ಲೇ ಇದ್ದ ತನ್ನ ಮನೆಯಿಂದ ಮಚ್ಚು ತಂದು ತಲೆ ಹಾಗೂ ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಹತ್ಯೆ ಮಾಡಿದ್ದಾನೆ.
ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿದ್ದಪ್ಪ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸಿದ್ದಪ್ಪ ಅವರು ಕೊನೆಯುಸಿರೆಳೆದಿದ್ದಾರೆ.
ಬಳಿಕ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಮಾದನಾಯ್ಕಹಳ್ಳಿ ಠಾಣೆ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಚಿಕ್ಕಬಿದರಕಲ್ಲಿನ ತನ್ನ ಅಣ್ಣನ ಮನೆಯಲ್ಲಿ ಅಡಗಿದ್ದ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
Advertisement