ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಪತ್ನಿಯೊಬ್ಬಳು ಮೊಬೈಲ್ ಚಾರ್ಜಿಂಗ್ ಕೇಬಲ್‌ನಿಂದ ಪತಿಯ ಕತ್ತು ಬಿಗಿದು ಹತ್ಯೆ ಮಾಡಿರುವ ಘಟನೆ ವೈಟ್ ಫೀಲ್ಡ್ ಬಳಿ ನಡೆದಿದೆ.
ಮಹೇಶ್ (36) ಹತ್ಯೆಯಾದ ದುರ್ದೈವಿ. ಆರೋಪಿಯನ್ನು ತೇಜಸ್ವಿನಿ ಎಂದು ಗುರ್ತಿಸಲಾಗಿದೆ. ಹಾಸನ ಮೂಲದ ಮಹೇಶ್ ಮತ್ತು ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ವೈಟ್ ಫೀಲ್ಡ್'ನ ಹಗದೂರಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಹೇಶ್ ಆಟೋ ಚಾಲಕನಾಗಿದ್ದರೆ, ಪತ್ನಿ ತೇಜಸ್ವಿನಿ ಖಾಸಗಿ ಫೈನಾನ್ಸ್ ನಲ್ಲಿ ಸಾಲ ಮಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ಕಳೆದ ವರ್ಷದಿಂದ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ಆಗುತ್ತಿತ್ತು.
ಈ ನಡುವೆ ತೇಜಸ್ವಿನಿ, ತಾನು ಕೆಲಸ ಮಾಡುವ ಫೈನಾನ್ಸ್ ಕಂಪನಿಯಲ್ಲಿ ಗಜೇಂದ್ರ ಎಂಬಾತನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಬಳಿ ಇದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಮಹೇಶ್'ಗೆ ಗೊತ್ತಾಗಿ ತೇಜಸ್ವಿನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಗಜೇಂದ್ರನಿಗೂ ಕರೆ ಮಾಡಿ ಪತ್ನಿಯ ಸಹವಾಸಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದ.
ಈ ನಡುವೆ ಮಹೇಶ್ ಕೆಲಸಕ್ಕೆ ಹೋದಾಗ ತೇಜಸ್ವಿನಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮಧ್ಯಾಹ್ನದ ವೇಳೆ ಮಹೇಶ್ ಮನೆಗೆ ಬಂದಿದ್ದು, ಪತ್ನಿ ಜೊತಗೆ ಗಜೇಂದ್ರ ಇರುವುದನ್ನು ನೋಡಿದ್ದಾನೆ. ಇದರಿಂದ ಕೋಪಗೊಂಡು ಪತ್ನಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದೇ ವೇಳೆ ಗಜೇಂದ್ರನ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ತೇಜಸ್ವಿನಿ ಮತ್ತು ಗಜೇಂದ್ರ ಇಬ್ಬರೂ ಸೇರಿ ಮೊಬೈಲ್ ಚಾರ್ಜಿಂಗ್ ಕೇಬಲ್ ನಿಂದ ಆತನ ಕತ್ತು ಬಿಗಿದು ಹತ್ಯೆ ಮಾಡಿದ್ದಾರೆ. ಘಟನೆ ಬಳಿಕ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
Advertisement