
ಬೆಂಗಳೂರು: ದೆಹಲಿಯಂತೆಯೇ ರಾಜ್ಯ ರಾಜಧಾನಿ ಬೆಂಗಳೂರಿನ ವಿಜಯನಗರದಲ್ಲಿ ಪಾಲಿಕೆ ಬಜಾರ್ ನಿರ್ಮಾಣಗೊಂಡಿದ್ದು, ಈ ತಿಂಗಳಾಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಇದು ಅಂಡರ್‌ಗ್ರೌಂಡ್ ಮಾರುಕಟ್ಟೆಯಾಗಿದ್ದು, ಹವಾನಿಯಂತ್ರಿತ ಮಾರುಕಟ್ಟೆಯಾಗಿರಲಿದೆ. ಡಿಸೆಂಬರ್ 2019ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದೀಗ ಪೂರ್ಣಗೊಂಡಿದ್ದು, ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಉದ್ಘಾಟನೆಗೊಳ್ಳಲಿದೆ. ಈ ಹೊಸ ಮಾರುಕಟ್ಟೆ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಸಮೀಪ ಇದ್ದು, ಇಲ್ಲಿ ಒಟ್ಟು 78 ಅಂಗಡಿಗಳಿರಲಿವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಲಿಕೆ ಬಜಾರ್ 100 ಮೀಟರ್ ಉದ್ದ, 11 ಮೀಟರ್ ಅಗಲ ಇದ್ದು, 3 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿದೆ. ಪಾದಚಾರಿ ಮಾರ್ಗದ ಎರಡೂ ಬದಿಗೆ 78ಕ್ಕೂ ಹೆಚ್ಚು ಮಳಿಗೆಗಳಿರಲಿವೆ.
ನಗರೋತ್ಥಾನ ಸ್ಕೀಮ್‌ನಲ್ಲಿ 5 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸೆನ್ಸರ್ ಹೊಂದಿದ ಸ್ಲೈಡಿಂಗ್ ಡೋರ್‌ಗಳು, ಎಸ್ಕಲೇಟರ್‌ಗಳು ಮತ್ತು ಲಿಫ್ಟ್ ಸೌಲಭ್ಯವನ್ನು ಹೊಂದಿರುವ ಮಾರುಕಟ್ಟೆಗೆ ಎರಡು ಗೇಟ್‌ಗಳ ಮೂಲಕ ಸುಲಭವಾಗಿ ಪ್ರವೇಶಿಸಬಹುದು. ಮಾರುಕಟ್ಟೆಗೆ ನೀರು ನುಗ್ಗದಂತೆ ಅದರ ಸುತ್ತ ಪ್ರತ್ಯೇಕ ಪೈಪ್‌ಲೈನ್ ನಿರ್ಮಿಸಿ ಮಳೆ ನೀರನ್ನು ಮುಖ್ಯರಸ್ತೆಯಲ್ಲಿರುವ ಚರಂಡಿಗೆ ಹರಿಯುವಂತೆ ಮಾಡಲಾಗಿದೆ.
ಈ ಹೊಸ ಅಂಡರ್ ಗ್ರೌಂಡ್ ಮಾರುಕಟ್ಟೆ ಬಗ್ಗೆ ಜನರಲ್ಲಿ ಈಗಾಗಲೇ ಕುತೂಹಲ ಹೆಚ್ಚಾಗಿದೆ. ಶಾಪಿಂಗ್ ಪ್ರಿಯರು ಉದ್ಘಾಟನೆಗಾಗಿ ಕಾತರುದಿಂದ ಕಾಯುತ್ತಿದ್ದಾರೆ.
ಪಾಲಿಕೆ ಬಜಾರ್'ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಜಯನಗರ ಶಾಸಕ ಕೃಷ್ಣಪ್ಪ ಮತ್ತಿತರರು ಉದ್ಘಾಟನೆ ಮಾಡುವ ನಿರೀಕ್ಷೆ ಇದೆ.
ಈ ಹಿಂದೆ ಪಾಲಿಕೆ ಬಜಾರ್ ನಿರ್ಮಾಣಕ್ಕಾಗಿ ಈ ಪ್ರದೇಶದಲ್ಲಿದ್ದ ಮಾರಾಟಗಾರರನ್ನು ತೆರವುಗೊಳಿಸಲಾಗಿತ್ತು. ಆದರೀಗ ಅವರಿಗೆ ಅಂಗಡಿಗಳನ್ನು ಯಾವ ರೀತಿಯಲ್ಲಿ ಹಂಚಿಗೆ ಮಾಡಲಾಗುತ್ತದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.
ಈ ನಡುವೆ ಇನ್ನೂ ಲೋಕಾರ್ಪಣೆಗೊಳ್ಳದ ಈ ಪಾಲಿಕೆ ಬಜಾರ್'ನ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಗಳಲ್ಲಿ ಓಡಾಡುತ್ತಿದ್ದು, ಸಾಕಷ್ಟು ಚರ್ಚೆಗಳು ಆರಂಭವಾಗಿವೆ.
ಪಾಲಿಕೆ ಬಜಾರ್ ಅಂಡರ್ ಗ್ರೌಂಡ್ ನಲ್ಲಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭಾರೀ ಮಳೆ ಸಂದರ್ಭದಲ್ಲಿ ಇದರ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Advertisement