ಬೆಂಗಳೂರು: 9 ತಿಂಗಳ ಮೇಲ್ಪಟ್ಟ ಮತ್ತು 4 ವರ್ಷದೊಳಗಿನ ಮಕ್ಕಳೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಸುರಕ್ಷತಾ ಚೀಲ (ಸೇಫ್ಟಿ ಹಾರ್ನೆಸ್) ಗಳಲ್ಲೇ ಕುಳ್ಳಿರಿಸಿಕೊಂಡು ಕರೆದೊಯ್ಯಬೇಕು ಹಾಗೂ ಆ ಚೀಲದ ಬೆಲ್ಟ್ ಗಳನ್ನು ಚಾಲಕನ ದೇಹಕ್ಕೆ ಅಳವಡಿಸುವ ನಿಯಮವನ್ನು ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಲುತ್ತಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಈಗಾಗಲೇ ಈ ನಿಯಮವನ್ನು ಕಡ್ಡಾಯಗೊಳಿಸಿದೆ. ಆದರೆ, ರಾಜ್ಯದಲ್ಲಿ ಇನ್ನೂ ಜಾರಿಗೆ ಬಂದಿಲ್ಲ. ಇದನ್ನು ಕಾರ್ಯರೂಪಕ್ಕೆ ತರುವ ಚಿಂತನೆಗಳು ನಡೆಯುತ್ತಿದ್ದು, ಈಗಾಗಲೇ ಜಾಗೃತಿ ಅಭಿಯಾನಗಳು ಆರಂಭವಾಗಿವೆ ಎಂದು ಸಾರಿಗೆ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.
ಸುರಕ್ಷತಾ ಹಾರ್ನೆಸ್ ಇಲ್ಲದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಮಕ್ಕಳು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳನ್ನು ಸವಾರರು ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಗಳ ಮೇಲೆ (ಮುಂಭಾಗ) ಕುಳ್ಳಿರಿಸಿಕೊಳ್ಳುವುದು ಅಥವಾ ಫುಟ್ ರೆಸ್ಟ್'ಗೆ ಮೀಸಲಿಟ್ಟ ಜಾಗದಲ್ಲಿ ನಿಲ್ಲಿಸುತ್ತಾರೆ. ಇದರಿಂದ ಬ್ರೇಕ್ ಹಾಕಿದಾಗ ಮಕ್ಕಳು ಸಮತೋಲನ ಕಳೆದುಕೊಂಡು ಚಾಲನೆಯಲ್ಲಿರುವ ವಾಹನಗಳಿಂದ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಕೆಲವು ಸಂದರ್ಭದಲ್ಲಿ ಮಕ್ಕಳು ನಿದ್ರೆಗೆ ಜಾರಿರುತ್ತಾರೆ. ಮಗುವನ್ನು ಕೈಯಲ್ಲಿ ಹಿಡಿದುಕೊಂಡು ವಾಹನ ಸವಾರಿ ಮಾಡುವವರನ್ನೂ ನೋಡುತ್ತಿರುತ್ತೇವೆ. ಇದು ಮಕ್ಕಳಿಗೆ ಅಪಾಯವನ್ನು ತಂದೊಡ್ಡುತ್ತದೆ. ಹೀಗಾಗಿ ಸುರಕ್ಷತಾ ಚೀಲಗಳು ಮಕ್ಕಳಿಗೆ ರಕ್ಷಣೆಯನ್ನು ನೀಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ರಾಜ್ಯಾದ್ಯಂತ ಸಾರಿಗೆ ಇಲಾಖೆ ಅಧಿಕಾರಿಗಳು ಸುರಕ್ಷತಾ ಚೀಲ (ಹಾರ್ನೆಸ್) ಮಹತ್ವದ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದ್ದು, ಕೆಲವು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಸುತ್ತಿದ್ದಾರೆ.
ಶೀಘ್ರದಲ್ಲೇ ರಾಜ್ಯದ ಎಲ್ಲಾ ಡಿಸಿ ಕಚೇರಿಗಳಲ್ಲೂ ಈ ಕಾರ್ಯಕ್ರಮಗಳ ನಡೆಸಲಾಗುವುದು. ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳಲ್ಲಿ ಜಾಗೃತಿ ಮೂಡಿಸಲು, ನಿಯಮವನ್ನು ಜಾರಿಗೊಳಿಸಲು ಯೋಜಿಸಲಾಗಿದೆ. ಈ ಜಾಗೃತಿ ಕಾರ್ಯಕ್ರಮದ ಬಳಿಕ ನಿಯಮ ಪಾಲಿಸದವರಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement