ಬಳ್ಳಾರಿ: ವಾಲ್ಮಿಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರ ಆಪ್ತರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಬಳ್ಳಾರಿಯ ವಿವಿಧೆಡೆ ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ ಮತ್ತೊಮ್ಮೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ನಾಗೇಂದ್ರ ಸಂಬಂಧಿ ಎರ್ರಿಸ್ವಾಮಿ ಮನೆ ಸೇರಿದಂತೆ ಕೆಲ ಆಪ್ತ ಸಹಾಯಕರು ಮತ್ತು ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಇಡಿ ಜಾರ್ಜ್ಶೀಟ್ ಸಲ್ಲಿಕೆಗೆ ಸಮಯ ಹತ್ತಿರ ಬಂದಿರುವುದರಿಂದ ಅಧಿಕಾರಿಗಳು ದಾಳಿ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು ಬೆಂಗಳೂರು, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದರು.
ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಗಸನಗೌಡ ದದ್ದಲ್ (ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ) ನಿವಾಸ, ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ (ಮಾಜಿ ಸಚಿವ) ಮನೆ ಮೇಲೂ ದಾಳಿ ನಡೆಸಿದ್ದರು.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಿ.ನಾಗೇಂದ್ರ ಫ್ಲ್ಯಾಟ್ ಸೇರಿದಂತೆ ಏಕಕಾಲಕ್ಕೆ 18 ಕಡೆ ದಾಳಿ ನಡೆದಿತ್ತು. ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಕಚೇರಿಯನ್ನೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
Advertisement