ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಉದ್ಯಮಿಗಳ ನಿವಾಸ, ಕಚೇರಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಿ ಆರ್ ಪಾಟೀಲ್ ಗೌಡ ಅವರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗೋವಾ ಮತ್ತು ಹುಬ್ಬಳ್ಳಿಯಿಂದ ಬಂದಿರುವ 20ಕ್ಕೂ ಹೆಚ್ಚು ಅಧಿಕಾರಿಗಳು ಕೊಪ್ಪಳ ತಾಲೂಕಿನ ಹೊಸ ಲಿಂಗಾಪುರ ಗ್ರಾಮದಲ್ಲಿರುವ ಡಿಕೆ ಶಿವಕುಮಾರ್ ಅವರ ಆಪ್ತ ವಿಆರ್ ಪಾಟೀಲ್ ಮನೆ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ.
ಉದ್ಯಮಿಯಾಗಿರುವ ವಿ.ಆರ್ ಪಾಟೀಲ್ ಒಡೆತನದ ಖಾಸಗಿ ಶಾಲೆಗೆ ಕಳೆದ ಜನವರಿ 27 ರಂದು ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಬಂದು ಹೋದ ಕೆಲವೇ ದಿನಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯ ಪ್ರಮುಖ ಗುತ್ತಿಗೆದಾರ ಪಿಚ್ಚೇಶ್ವರ ರಾವ್ ಅವರ ಮನೆ ಮತ್ತು ಪಾರ್ವತಿ ನಗರದಲ್ಲಿನ ಅವರ ಶ್ರೀನಿವಾಸ್ ಕನ್ಸಸ್ಟ್ರಕ್ಷನ್ಸ್ ಕಚೇರಿ ಮೇಲೆ ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ರಸ್ತೆ, ಕಾಲುವೆ ಸೇರಿದಂತೆ ವಿವಿಧ ಬೃಹತ್ ಕಾಮಗಾರಿಗಳ ಕಾಂಟ್ರಾಕ್ಟ್ ಮಾಡಿರುವ ಪಿಚ್ಚೇಶ್ವರ ರಾವ್, ಆದಾಯ ತೆರಿಗೆ ವಂಚನೆ ಹಾಗೂ ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಂದಿರುವ ಐಟಿ ಅಧಿಕಾರಿಗಳ ನಾಲ್ಕು ಜನರ ತಂಡದಿಂದ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ತೆರಿಗೆ ವಂಚನೆ ಆರೋಪದಡಿ ಆಂಧ್ರಪ್ರದೇಶ ಮೂಲದ ಉದ್ಯಮಿ ವಂಶಿ ಎಂಬುವರಿಗೆ ಸಂಬಂಧಿಸಿದ ಬೆಂಗಳೂರಿನ ಜಯನಗರ 8ನೇ ಹಂತದಲ್ಲಿರುವ ಮನೆ, ಜೆ.ಸಿ. ರಸ್ತೆಯ ಜೈನ್ ಹೈಟ್ಸ್ ಕಟ್ಟಡದಲ್ಲಿರುವ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ. ವಂಶಿ ರಸ್ತೆ ಗುತ್ತಿಗೆದಾರರಾಗಿದ್ದಾರೆ. ಇಂದು ಬೆಳಗ್ಗೆಯೇ ದಾಳಿ ಮಾಡಿರುವ ಐಟಿ ಅಧಿಕಾರಿಗಳ ತಂಡ, ಅವರ ಆದಾಯ ಮತ್ತು ವ್ಯವಹಾರದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
Advertisement