
ಬೆಂಗಳೂರು: ಇತ್ತೀಚೆಗೆ ವರ್ತುರು ಸಮೀಪದ ಪ್ರೆಸ್ಟೀಜ್ ಲೇಕ್ ಸೈಡ್ ಹೆಬಿಬಾಬ್ ಅಪಾರ್ಟ್ ಮೆಂಟ್'ನ ಈಜು ಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ 10 ವರ್ಷದ ಬಾಲಕಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಹೆಬಿಬಾಬ್ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ದೇಬಸಿಸ್ ಸಿನ್ಹಾ, ಜಾವೇದಿ ಸಫೀಕ್ ರಾಂ. ಸಂತೋಷ್ ಮಹಾರಾಣ, ಬಿಕಾಸ್ ಕುಮಾರ್ ಫೋರಿಡಾ, ಭಕ್ತ ಚರಣ್ ಪ್ರಧಾನ್, ಸುರೇಶ್ ಹಾಗೂ ಗೋವಿಂದ್ ಮಂಡಲ್ ಬಂಧಿತರಾಗಿದ್ದಾರೆ.
2023ರ ಡಿ.28 ರಂದು ಅಪಾರ್ಟ್ ಮೆಂಟ್ ಆವರಣದ ಈಜುಕೊಳದಲ್ಲಿ ಆಟವಾಡುವಾಗ ರಾಜೇಶ್ ಕುಮಾರ್ ಧರ್ಮೆಲಾ ದಂಪತಿಯ 10 ವರ್ಷದ ಪುತ್ರಿ ಮಾನ್ಯ ಮೃತಪಟ್ಟಿದ್ದಳು. ಈಜು ಕೊಳದಲ್ಲಿ ವಿದ್ಯುತ್ ಪ್ರವಹಿಸಿರುವ ಬಗ್ಗೆ ಅಪಾರ್ಟ್ ಮೆಂಟ್ ನಿರ್ವಹಣೆ ಹೊತ್ತಿರುವ ಸಂಘದ ಹಾಗೂ ಎಲೆಕ್ಟ್ರಿಶಿಯನ್ ಅವರಿಗೆ ಮಾಹಿತಿ ನೀಡಿದರೂ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ತಮ್ಮ ಮಗಳ ಸಾವಾಗಿದ. ತಮ್ಮ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬಾಲಕಿಯ ತಂದೆ ರಾಜೇಶ್ ಆಗ್ರಹಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳ ಪರಿಶೀಲಿಸಿದಾಗ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ನಿರ್ಲಕ್ಷ್ಯತನಕ್ಕೆ ಸಾಕ್ಷ್ಯ ದೊರೆತಿತ್ತು. ಈ ಮಾಹಿತಿ ಆಧರಿಸಿ ಸಂಘದ ಅಧ್ಯಕ್ಷ ಸೇರಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement