ರೈತರ ನೊಂದಣಿಯಲ್ಲಿ ಅಕ್ರಮ: ಒಂದು ವಾರ ಕೊಬ್ಬರಿ ಖರೀದಿ ಸ್ಥಗಿತ!

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕೊಬ್ಬರಿ ಖರೀದಿಗೆ ರೈತರ ನೊಂದಣಿಯಲ್ಲಿ ಅವ್ಯವಹಾರಗಳಾಗಿರುವುದರಿಂದ ತಾತ್ಕಾಲಿಕ ವಾಗಿ ಒಂದು ವಾರ ಕಾಲ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಬುಧವಾರ ಹೇಳಿದರು.

ವಿಧಾನಸಭೆಯಲ್ಲಿ ಜೆಡಿಎಸ್‍ನ ಎಚ್.ಡಿ.ರೇವಣ್ಣ ಸೇರಿದಂತೆ ಪಕ್ಷಾತೀತ ವಾಗಿ ಬಹುತೇಕ ಶಾಸಕರು ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ವಿಚಾರ ಕುರಿತು ಸಚಿವರು ಉತ್ತರ ನೀಡಿದರು.

ಸಂಗ್ರಹ ಚಿತ್ರ
ಕೊಬ್ಬರಿ ಬೆಳೆಗಾರರ ನೆರವಿಗೆ ಮುಂದಾಗುವಂತೆ ಕೇಂದ್ರ ಸಚಿವರಿಗೆ ಜೆಡಿಎಸ್ ನಿಯೋಗದ ಮನವಿ

ಇಲಾಖೆಯಿಂದ ಖರೀದಿಸಲಾಗಿದ್ದ ಕಂಪ್ಯೂಟರ್ ಬದಲಿಗೆ ಅಧಿಕಾರಿಗಳು ಮತ್ತು ಹೊರ ಗುತ್ತಿಗೆ ಸಿಬ್ಬಂದಿಗಳು ತಾವೇ ಬೇರೆ ಕಂಪ್ಯೂಟರ್ ಖರೀದಿಸಿ ಅದನ್ನು ರೈತರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ನೋಂದಣಿ ಮಾಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇದು ವ್ಯಾಪಕವಾಗಿ ಕಂಡುಬರುತ್ತಿದೆ. ಬೇರೆ ಜಿಲ್ಲೆಯಿಂದ 3500 ರೈತರನ್ನು ಹಾಸನದಲ್ಲಿ ನೋಂದಾವಣಿ ಮಾಡಲಾಗಿದೆ. ಹೀಗಾಗಿ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ 9 ಮಂದಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆ ಪರಿಷ್ಕರಣೆಗೊಳಪಡಿಸಲಾಗುತ್ತಿದ್ದು, ಅಲ್ಲಿಯವರೆಗೆ ತಾತ್ಕಾಲಿಕ ವಾಗಿ ಖರೀದಿ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈ ಮೊದಲು ಕೇಂದ್ರ ಸರ್ಕಾರ 7 ತಿಂಗಳ ಅವಧಿವರೆಗೂ ಕೊಬ್ಬರಿ ಖರೀದಿಗೆ ಅವಕಾಶ ನೀಡಿತ್ತು. ಪ್ರಸ್ತುತ 3 ತಿಂಗಳಿನಂತೆ ಎರಡು ಅವಧಿಗೆ ಖರೀದಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಖರೀದಿಯಲ್ಲಿ ನಫೆಡ್ 200 ಕೋಟಿ ರೂ. ನಷ್ಟ ಅನುಭವಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಗ್ರಹ ಚಿತ್ರ
ವಿಧಾನಸಭೆ ಕಲಾಪ: ಅಕ್ರಮ ಮದ್ಯ ಮಾರಾಟದಲ್ಲಿ ಅಬಕಾರಿ ಅಧಿಕಾರಿಗಳೂ ಕೈಜೋಡಿಸಿದ್ದಾರೆ- ಕ್ರಮಕ್ಕೆ ಶಾಸಕರ ಆಗ್ರಹ

ಉಂಡೆ ಕೊಬ್ಬರಿಯನ್ನು ಶೇ.25ರಷ್ಟು ಖರೀದಿಸಲು ಅವಕಾಶವಿದೆ. ಆ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಹಾಗೆಯೇ ಹೋಳಾಗಿರುವ ವಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಲು ಅನುಮತಿ ನೀಡುವಂತೆಯೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಶಾಸಕರಾದ ಬಿಜೆಪಿಯ ಬಿ.ಸುರೇಶ್‌ಗೌಡ ಮತ್ತು ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕೊಬ್ಬರಿಯ ಗುಣಮಟ್ಟ ಹದಗೆಡುತ್ತಿದ್ದು, ಇದೀಗ ಖರೀದಿ ಕೂಡ ಸ್ಥಗಿತಗೊಳ್ಳುವುದರಿಂದ ನೋಂದಣಿ ಮಾಡಿಕೊಂಡಿರುವ ನಿಜವಾದ ರೈತರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ, ನೋಂದಣಿ ಮತ್ತು ಖರೀದಿ ಏಕಕಾಲಕ್ಕೆ ಆರಂಭವಾಗಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com