ಬೆಂಗಳೂರು: 25 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಗೆ ಹೇಳದೆ ಸಂಬಂಧಿಕರು ಮದುವೆ ಮಾಡಿಸಿರುವ ಘಟನೆಯೊಂದು ನಗರದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಓರ್ವನನ್ನು ಬಂಧನಕ್ಕೊಳಪಡಿಸಿದ್ದಾರೆ.
“ಫೆ.15 ರಂದು 25 ವರ್ಷದ ಯುವಕನೊಂದಿಗೆ ಬಾಲಕಿಗೆ ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ ಇವರೆಲ್ಲ ಸೇರಿ ತಂದೆ-ತಾಯಿಯಾಗಿರುವ ನಮಗೆ ಗೊತ್ತೇ ಇಲ್ಲದೆ ಮದುವೆ ಮಾಡಿಸಿದ್ದಾರೆ. ಮಗಳು ಇನ್ನೂ ಅಪ್ರಾಪ್ತೆಯಾಗಿದ್ದಾಳೆ. ನನ್ನ ಮಗಳನ್ನು ಪುಸಲಾಯಿಸಿ ಮದುವೆ ಮಾಡಿಸಿದ್ದಾರೆ. ಕೈವಾರದಲಿನ ಯಲಮ್ಮ ದೇವಾಲಯದಲ್ಲಿ ತಂದೆ ತಾಯಿಗೆ ಗೊತ್ತಿಲ್ಲದೆ ಮದುವೆ ಮಾಡಲಾಗಿದೆ” ಎಂದು ಬಾಲಕಿ ತಾಯಿ ಸರ್ಜಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ನನ್ನ ಮಗಳು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬಾಲಕಿಯನ್ನು ದೊಡ್ಡಪ್ಪ ದೊಡ್ಡಮ್ಮ ಪುಸಲಾಯಿಸಿ ವಿವಾಹ ಮಾಡಿಸಿದ್ದಾರೆಂದು ದೂರಿನಲ್ಲಿ ಹೇಳಿದ್ದಾರೆ.
ಬಾಲಕಿಯ ತಂದೆ ದಿನಗೂಲಿ ಕಾರ್ಮಿಕನಾಗಿದ್ದು, ಕುಡಿತದ ಚಟಕ್ಕೆ ಬಿದ್ದು ಕೆಲಸ ಬಿಟ್ಟಿದ್ದ. ನಂತರ ಮನೆ ನಿಭಾಯಿಸು ಬಾಲಕಿಯ ತಾಯಿ ಚಹಾ ಅಂಗಡಿ ತೆರೆದಿದ್ದರು. ನಂತರ ಮಗಳನ್ನು ಅಜ್ಜಿಯ ಮನೆಗೆ ಕಳುಹಿಸಿದ್ದರು.
ಮನೆಯಲ್ಲಿದ್ದ ಬಾಲಕಿಗೆ ಆಕೆಯ ಅಜ್ಜಿ ಹಾಗೂ ದೊಡ್ಡಪ್ಪ ಮದುವೆ ಮಾಡಿಸಿದ್ದಾರೆ. ಮದುವೆಯಾದ ದಿನ ಬಾಲಕಿ ತಾಯಿ ಮನೆಗೆ ಹೋಗಿದ್ದು, ಈ ವೇಳೆ ಬಾಲಕಿಯ ಕುತ್ತಿಗೆಯಲ್ಲಿ ಮಂಗಳಸೂತ್ರ ಇರುವುದನ್ನು ನೋಡಿದ್ದಾರೆ. ಬಾಲಕಿಯನ್ನು ವಿಚಾರಿಸಿದಾಗ ನಡೆದ ವಿಚಾರವನ್ನು ಬಾಲಕಿ ಹೇಳಿಕೊಂಡಿದ್ದಾಳೆ. ಬಳಿಕ ಬಾಲಕಿಯ ತಾಯಿ ಠಾಣೆ ಮೆಟ್ಟಿಲೇರಿ ವಿವಾದ ಯುವಕನ ಕುಟುಂಬ ಹಾಗೂ ಬಾಲಕಿಯ ದೊಡ್ಡಪ್ಪ ಹಾಗೂ ಅಜ್ಜಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಸರ್ಜಾಪುರ ಪೊಲೀಸರು ಪೋಕ್ಸೋ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವನನ್ನು ಬಂಧನಕ್ಕೊಳಪಡಿಸಿದ್ದಾರೆ. 63 ವರ್ಷದ ಬಾಲಕಿಯ ಅಜ್ಜಿ ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ.
Advertisement