ಪರಿಷ್ಕರಿಸಿದ ಮಾರ್ಗಸೂಚಿ ದರದ ಅನ್ವಯ ಆಸ್ತಿ ತೆರಿಗೆ ಸಂಗ್ರಹಿಸಿ: ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಆಯೋಗ ಶಿಫಾರಸು

ಆದಾಯ ಮೂಲ ಸುಧಾರಿಸಲು ಸ್ಥಳೀಯ ಸಂಸ್ಥೆಗಳು ಪರಿಷ್ಕರಿಸಿದ ಮಾರ್ಗಸೂಚಿ ದರದ ಅನ್ವಯ ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on

ಬೆಂಗಳೂರು: ಆದಾಯ ಮೂಲ ಸುಧಾರಿಸಲು ಸ್ಥಳೀಯ ಸಂಸ್ಥೆಗಳು ಪರಿಷ್ಕರಿಸಿದ ಮಾರ್ಗಸೂಚಿ ದರದ ಅನ್ವಯ ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ.

ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾದ 2024-25ನೇ ಸಾಲಿನ ವರದಿಯಲ್ಲಿ 2015-16ರಿಂದ 2019-20ರವರೆಗಿನ 14ನೇ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ಕೇಂದ್ರದ ತೆರಿಗೆ ಮತ್ತು ಸುಂಕಗಳ ಪಾಲಿನಲ್ಲಿ ಒಟ್ಟಾರೆ ಶೇ.4.71ರಷ್ಟು ಪಾಲನ್ನು ಹಂಚಿಕೆ ಮಾಡಿತ್ತು. ಆದರೆ 2020-21ರಿಂದ 2025-26ರ ಅವಧಿಗೆ ಇದನ್ನು ಶೇ.3.64ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಈವರೆಗೆ 25,435 ಕೋಟಿ ರೂ. ಹಣಕಾಸು ಹಂಚಿಕೆ ಕಡಿಮೆಯಾಗಲಿದೆ. 2025-26ರ ವೇಳೆಗೆ ಇನ್ನೂ 16 ಸಾವಿರ ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರದ 15ನೇ ಹಣಕಾಸು ಆಯೋಗವು 2021-22ರಿಂದ 2025-26ರವರೆಗೆ ರಾಜ್ಯಕ್ಕೆ ಶಿಫಾರಸು ಮಾಡಿದ್ದ 8,042 ಕೋಟಿ ರೂ. ಅನುದಾನ ಇದುವರೆಗೂ ಬಂದಿಲ್ಲ. ಈ ಅನುದಾನವನ್ನು ರಾಜ್ಯ ಸರ್ಕಾರವು 2025-26ರ ಒಳಗಡೆ ಪಡೆಯದಿದ್ದರೆ ಕೈ ಬಿಟ್ಟು ಹೋಗುತ್ತದೆ. ಹೀಗಾಗಿ ಈ ಹಣ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು 15ನೇ ರಾಜ್ಯ ಹಣಕಾಸು ಆಯೋಗದ ವರದಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿದೆ.

ಬಿಬಿಎಂಪಿ ಕಚೇರಿ
ಮಾರ್ಗಸೂಚಿ ದರದಂತೆ ಆಸ್ತಿ ತೆರಿಗೆ ನಿಗದಿ ಮಾಡಲು ಬಿಬಿಎಂಪಿ ಮುಂದು!

ಕೇಂದ್ರ ಹಣಕಾಸು ಆಯೋಗವು ಪೆರಫರೆಲ್‌ ರಿಂಗ್‌ ರಸ್ತೆಗೆ 3,000 ಕೋಟಿ ರೂ. ಹಾಗೂ ಬೆಂಗಳೂರು ಸುತ್ತಮುತ್ತಲಿನ ಜಲಮೂಲಗಳ ಸುಧಾರಣೆಗೆ 3,000 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಆದರೆ, ಈ ವಿಶೇಷ ಅನುದಾನ ಹಾಗೂ ನಿರ್ದಿಷ್ಟ ಅನುದಾನ ಎರಡನ್ನೂ ಕೇಂದ್ರ ನೀಡಿಲ್ಲ. ಕೂಡಲೇ ಆ ಹಣ ಪಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಇದರ ಜೊತೆಗೆ, 15ನೇ ಹಣಕಾಸು ಆಯೋಗವು 2021-22ರಿಂದ 2025-26ರವರೆಗೆ ಕರ್ನಾಟಕಕ್ಕೆ ಸ್ಥಳೀಯ ಸಂಸ್ಥೆಗಳ ಮೂಲಕ ಬಳಕೆ ಮಾಡಲು 2,929 ಕೋಟಿ ರೂ. ಆರೋಗ್ಯ ಅನುದಾನ ಶಿಫಾರಸು ಮಾಡಿದೆ. ಈ ಪೈಕಿ 2022-23ರವರೆಗೆ 741 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸದಿರುವುದು ಹಾಗೂ ಘಟಕಗಳಿಗೆ ಹೊಂದಾಣಿಕೆ ಹಣ ನೀಡದಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಈವರೆಗೆ 942 ಕೋಟಿ ರೂ.ಗಳನ್ನು ತಡೆಹಿಡಿಯಲಾಗಿದೆ.

15ನೇ ಹಣಕಾಸು ಆಯೋಗದಿಂದ ಶಿಫಾರಸು ಮಾಡಲಾದ ಹಂಚಿಕೆಯ ಮೊತ್ತದ ಶೇ.15ರಷ್ಟನ್ನು ಸಂಸ್ಥೆಗಳು ರಚನೆಯಾಗಿಲ್ಲದಿರುವ ಕಾರಣಕ್ಕೆ ತಡೆ ಹಿಡಿಯಲಾಗಿದೆ. ಸರಿಯಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ರಚಿಸಿದ್ದರೆ ಮಾತ್ರ ನೀಡುವುದಾಗಿ ಷರತ್ತು ಇದ್ದು, ಅದನ್ನು ರಾಜ್ಯ ಸರ್ಕಾರ ನಿಭಾಯಿಸಿಲ್ಲ. ಹೀಗಾಗಿ 2021-22ರಿಂದ 2023-24ರವರೆಗೆ 1,100 ಕೋಟಿ ರೂ. ತಡೆಹಿಡಿಯಲಾಗಿದೆ. 2025-26ರ ಒಳಗಾಗಿ ಸರಿಪಡಿಸದಿದ್ದರೆ ಈ ಹಣ ಬರುವುದಿಲ್ಲ ಎಂದು ಆಯೋಗವು ಎಚ್ಚರಿಸಿದೆ.

ಬಿಬಿಎಂಪಿ ಕಚೇರಿ
ಹಣಕಾಸು ಸಮಿತಿಯಿಂದ ಕರ್ನಾಟಕಕ್ಕೆ ಭಾರಿ ನಷ್ಟ: ಸಿಎಂ ಸಿದ್ದರಾಮಯ್ಯ

ಸ್ಥಳೀಯ ಸಂಸ್ಥೆಗಳಿಗೆ ಶೇ.49ರಷ್ಟು ಅನುದಾನ: ಬಿಬಿಎಂಪಿ, ನಗರ ಪಾಲಿಕೆಗಳಂತಹ ದೊಡ್ಡ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುದಾನ ಹಂಚಿಕೆಯನ್ನು ವಾರ್ಡ್‌ವಾರು ಮಾಡಬೇಕು. ಜೊತೆಗೆ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ಕ್ರಮವಾಗಿ 51:49 ಅನುಪಾತದಲ್ಲಿ ಹಣಕಾಸು ಹಂಚಿಕೆಯಾಗಬೇಕು. ಶೇ.49ರಲ್ಲಿ ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಶೇ.35ರಷ್ಟು, ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ.13 ಹಾಗೂ ಬಿಬಿಎಂಪಿಗೆ ಹೆಚ್ಚುವರಿಯಾಗಿ ಶೇ.1ರಷ್ಟು ಅನುದಾನ ಒದಗಿಸಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ.

ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿರುವ ಅವಶ್ಯಕ ಖಾಲಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗೆ ನಿಯಮಿತವಾಗಿ ತರಬೇತಿಗಾಗಿ 'ತರಬೇತಿ ನೀತಿ' ರೂಪಿಸಲು ಹಾಗೂ ಸಾಕಷ್ಟು ಅನುದಾನ ಒದಗಿಸಲು ಶಿಫಾರಸು ಮಾಡಲಾಗಿದೆ.

ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಪರಿಷ್ಕರಿಸಿದ ಮಾರ್ಗಸೂಚಿ ದರದ ಅನ್ವಯ ಆಸ್ತಿ ತೆರಿಗೆ ವಿಧಿಸಬೇಕು. ಬಿಬಿಎಂಪಿಯು ಬಜೆಟ್‌ ಜೊತೆಗೆ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಆಯೋಗ ಶಿಫಾರಸು ಮಾಡುತ್ತದೆ. ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನವನ್ನು ಪರಿಶೀಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com