ಕುಡಿದ ಅಮಲಿನಲ್ಲಿ ದುರ್ವರ್ತನೆ: ಟೆಕ್ಕಿ ವಿರುದ್ಧವೇ ದೂರು ನೀಡಿ, ಲಾಠಿ ಚಾರ್ಜ್ ಮಾಡಿಸಿದ ಕಿಡಿಕೇಡಿಗಳು!

ಕುಡಿದ ಅಮಲಿನಲ್ಲಿ ಟೆಕ್ಕಿಯೊಂದಿಗೆ ದುರ್ವರ್ತನೆ ತೋರಿದ್ದಲ್ಲದೆ, ಆತನ ವಿರುದ್ಧ ದೂರು ನೀಡಿ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿರುವ ಘಟನೆಯೊಂದು ಹೊಸ ವರ್ಷಾಚರಣೆ ದಿನದಂದು ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕುಡಿದ ಅಮಲಿನಲ್ಲಿ ಟೆಕ್ಕಿಯೊಂದಿಗೆ ದುರ್ವರ್ತನೆ ತೋರಿದ್ದಲ್ಲದೆ, ಆತನ ವಿರುದ್ಧ ದೂರು ನೀಡಿ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿರುವ ಘಟನೆಯೊಂದು ಹೊಸ ವರ್ಷಾಚರಣೆ ದಿನದಂದು ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೋವಾರ ತಡರಾತ್ರಿ 2.30-3 ಗಂಟೆ ಸುಮಾರಿಗೆ ನಗರದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ. ಗುಜರಾತ್ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಆಶಿಶ್ (29) ಅವರು, ತಮ್ಮ ಸ್ನೇಹಿತರೊಂದಿಗೆ ನ್ಯೂಇಯರ್ ಪಾರ್ಟಿ ಮುಗಿಸಿ ಸಂಪಿಗೆಹಳ್ಳಿಯಲ್ಲಿರುವ ತಮ್ಮ ಮನೆಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು.

ಈ ವೇಳೆ ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡುತ್ತಿದ್ದ ಕಿಡಿಗೇಡಿಗಳ ಗುಂಪೊಂದು, ಎಡ ಭಾಗದಿಂದಲೇ ಆಶಿಶ್ ಅವರ ಕಾರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ, ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾರೆ. ಈ ವೇಳೆ ಆಶಿಶ್ ಅವರು ಹಾರ್ನ್ ಮಾಡಿದ್ದಾರೆ. ಬಳಿಕ ಕಾರನ್ನು ನಿಲ್ಲಿಸಿ, ಕೆಳಗಿಳಿದಿರುವ ಕಿಡಿಗೇಡಿಗಳು, ಆಶಿಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ, ಕಾರಿಗೆ ಹಾನಿ ಮಾಡಿದ್ದಾರೆ. ಅಲ್ಲದೆ, ಹೊಸ ವರ್ಷಾಚರಣೆಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರನ್ನು ಸ್ಥಳಕ್ಕೆ ಕರೆಸಿ, ಆಶಿಶ್ ವಿರುದ್ಧ ದೂರು ನೀಡಿದ್ದಾರೆ.

ಸ್ಥಳದಲ್ಲಿ ಏನಾಯಿತು ಎಂಬುದನ್ನು ಅರಿಯದ ಪೊಲೀಸರು, ಆಶಿಶ್ ಅವರ ಮೇಲೆಯೇ ಕೂಗಾಡಿ, ಲಾಠಿಚಾರ್ಜ್ ನಡೆಸಿ, ಸ್ಥಳದಿಂದ ಹೋಗುವಂತೆ ಸೂಚಿಸಿದ್ದಾರೆ.

ಇದರಿಂದ ತೀವ್ರ ಬೇಸರಗೊಂಡಿದ್ದ ಆಶಿಶ್ ಅವರು, ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಮೇಲ್ಸೇತುವೆಗೆ ಕಾರನ್ನು ಗುದ್ದಿಸಿದ್ದು, ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು  ನೆರವಾಗಿ, ಮನೆಗೆ ತೆರಳಲು ಸಹಾಯ ಮಾಡಿದ್ದಾರೆ.

ಬಳಿಕ ಆಶಿಶ್ ಅವರು ತಮ್ಮ ಸಹೋದರನ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಇದರಿಂದ ಕೆಂಡಾಮಂಡಲಗೊಂಡ ಆಶಿಶ್ ಅವರ ಸಹೋದರ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಟ್ವೀಟ್ ಆಧರಿಸಿ ಮಹದೇವಪುರ ಪೊಲೀಸರು ಆಶಿಶ್ ಅವರನ್ನು ಸಂಪರ್ಕಿಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ವೇಳೆ ಆಶಿಶ್ ಅವರು ಕಿಡಿಗೇಡಿಗಳ ಕಾರಿನ ಫೋಟೋವನ್ನು ತೆಗೆದುಕೊಂಡಿದ್ದಾರೆ. ಇದನ್ನು ಪೊಲೀಸರಿಗೆ ನೀಡಿದ್ದಾರೆ. ಕಿಡಿಗೇಡಿಗಳು ತುಮಕೂರು ಜಿಲ್ಲೆಯಲ್ಲಿ ನೋಂದಣಿಯಾದ ಕಾರನ್ನು ಚಲಾಯಿಸುತ್ತಿದ್ದರು ಎಂಬುದು ಪೊಲೀಸರಿಗೆ ತಿಳಿದುಬಂದಿದೆ.

ಹೊಸ ವರ್ಷದ ನಂತರದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸ್ನೇಹಿತನನ್ನು ಬಿಟ್ಟು ಮನೆಗೆ ಹಿಂದಿರುಗುತ್ತಿದ್ದೇನೆ. “ನಾನು ಮದ್ಯದ ಅಮಲಿನಲ್ಲಿ ಇರಲಿಲ್ಲ. ಕಂಟ್ರೋಲ್ ರೂಂಗೆ ಕರೆ ಮಾಡಿದರೂ ಪೊಲೀಸರಿಂದ ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ನನ್ನ ಸಹೋದರ ಉಡುಗೊರೆಯಾಗಿ ನೀಡಿದ್ದ ಚಿನ್ನದ ಸರ ಕೂಡ ನಾಪತ್ತೆಯಾಗಿದೆ. ಘಟನೆಯ ಬಗ್ಗೆ ನನ್ನ ಸಹೋದರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ, ಪೊಲೀಸರಿಂದ ತ್ವರಿತ ಪ್ರತಿಕ್ರಿಯೆ ಸಿಕ್ಕಿತು.

ಪೊಲೀಸ್ ಅಧಿಕಾರಿಯೊಬ್ಬರು ಆಸ್ಪತ್ರೆಗೆ ಬಂದು ನನ್ನ ಹೇಳಿಕೆಯನ್ನು ದಾಖಲಿಸಿಕೊಂಡರು. ನಾನು ಎರಡು ಪುಟಗಳ ಹೇಳಿಕೆ ನೀಡಿದ್ದೇನೆ, ಆದರೆ, ಕೆಲವು ವಿವರಗಳನ್ನು ಎಫ್‌ಐಆರ್ ಪ್ರತಿಯಲ್ಲಿ ನಮೂದಿಸಿಲ್ಲ. ಪೊಲೀಸರು ಆರೋಪಿಗಳನ್ನು ನಂಬಿ ಘಟನೆಯ ಸ್ಥಳದಲ್ಲಿ ನನ್ನ ಮೇಲೆ ಲಾಠಿ ಪ್ರಹಾರ ಮಾಡಿದ್ದರು ಎಂದು ಆಶಿಶ್ ಅವರು ಹೇಳಿದ್ದಾರೆ.

ಆರೋಪಿಗಳ ವಿರುದ್ದ ಇದೀಗ ಐಸಿಸಿ ಸೆಕ್ಷನ್ 324ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಘಟನೆ ಬೆಳಕಿಗೆ ಬಂದಿತ್ತು. ಕೂಡಲೇ ಪ್ರತಿಕ್ರಿಯಿಸಿ ಸಂತ್ರಸ್ತ ವ್ಯಕ್ತಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಕೆಲ ಹೇಳಿಕೆಗಳು ದಾಖಲಾಗಿಲ್ಲ ಎಂಬುದು ತಿಳಿದು ಬಂದರೆ, ತನಿಖೆ ಸಮಯದಲ್ಲಿ ಸೇರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com