ನಗರದಲ್ಲಿ ಪೊಲೀಸರು ಶಾಂತಿಯುತ, ನಿರ್ಭೀತ ವಾತಾವರಣ ನಿರ್ಮಿಸಬೇಕು: ಸಿಎಂ ಸಿದ್ದರಾಮಯ್ಯ ಸೂಚನೆ

ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಶಾಂತಿಯುತ ಮತ್ತು ನಿರ್ಭೀತ ವಾತಾವರಣವನ್ನು ನಿರ್ಮಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ಪೊಲೀಸರು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಶಾಂತಿಯುತ ಮತ್ತು ನಿರ್ಭೀತ ವಾತಾವರಣವನ್ನು ನಿರ್ಮಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ಪೊಲೀಸರು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಶನಿವಾರದಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

'ಅಪರಾಧಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ, ಅವುಗಳನ್ನು ಕಡಿಮೆ ಮಾಡಬಹುದು. ತಡೆಗಟ್ಟಬಹುದಾದ ಅಪರಾಧಗಳಿಗೆ ಪೊಲೀಸರು ಆದ್ಯತೆ ನೀಡಬೇಕು. ಡ್ರಗ್ಸ್ ಮಾಫಿಯಾವನ್ನು ಕೊನೆಗಾಣಿಸಲು, ಒಂಟಿಯಾಗಿ ವಾಸಿಸುವವರನ್ನು ಗುರುತಿಸಿ ಅವರ ರಕ್ಷಣೆಗೆ ಆದ್ಯತೆ ನೀಡಬೇಕು. ಜತೆಗೆ ಪೊಲೀಸ್ ಬೀಟ್ ವ್ಯವಸ್ಥೆ ಬಲಪಡಿಸಬೇಕು ಎಂದು ನಗರ ಪೊಲೀಸರಿಗೆ ಸೂಚಿಸಿದರು.

ಹೊಯ್ಸಳ ಗಸ್ತು ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರಿಯಲ್ ಎಸ್ಟೇಟ್ ಜನರೊಂದಿಗೆ ಶಾಮೀಲಾಗಿ ಅಕ್ರಮದಲ್ಲಿ ತೊಡಗುವುದು ಸರಿಯಲ್ಲ. ಇದರಿಂದಾಗಿ ಜನರು ಪೊಲೀಸ್ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಅಕ್ರಮದಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೌಡಿಸಂಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಇತ್ತೀಚೆಗೆ ನಡೆದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್‌ ಕಾಪಾಡಿದ ಪೊಲೀಸ್‌ ಆಯುಕ್ತರನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com