ನ್ಯಾಯಾಲಯದ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳ ತೆರವು: ಡಿಕೆ.ಶಿವಕುಮಾರ್

ಪಾದಚಾರಿ ಮಾರ್ಗಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸುವಂತಿಲ್ಲ, ಹೈಕೋರ್ಟ್ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್ ಅವರು ಶನಿವಾರ ಹೇಳಿದರು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಪಾದಚಾರಿ ಮಾರ್ಗಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸುವಂತಿಲ್ಲ, ಹೈಕೋರ್ಟ್ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್ ಅವರು ಶನಿವಾರ ಹೇಳಿದರು.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ನನ್ನ ಗಮನದಲ್ಲೂ ಇದೆ. ಎರಡು ಮೂರು ಬಾರಿ ನನ್ನನ್ನೂ ಭೇಟಿ‌ ಮಾಡಿದ್ದರು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸರಿಪಡಿಸಬೇಕು ಈ ನಿಟ್ಟಿನಲ್ಲಿ ಪಾದಚಾರಿ ಮಾರ್ಗಗಳು ಜನರ ಓಡಾಟಕ್ಕೆ ಮುಕ್ತವಾಗಿರಬೇಕು. ಈ ಕುರಿತು ಹೈಕೋರ್ಟ್ ಆದೇಶ ನೀಡಿದ್ದು, ಆದೇಶವನ್ನು ಪಾಲಿಸಬೇಕಿದೆ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ತಳ್ಳುಗಾಡಿ ಎಲ್ಲಾ ಹಾಕಿಕೊಂಡು ವ್ಯಾಪಾರ ಮಾಡಿದರೆ ತೊಂದರೆ ಇಲ್ಲ. ವ್ಯಾಪಾರದಿಂದ ಜನರ ಓಡಾಟಕ್ಕೆ ತೊಂದರೆ ಆದಾಗ ನಾಗರಿಕರಿಂದ ನಮಗೂ ದೂರುಗಳು ಬರುತ್ತವೆ. ಈಗಾಗಲೇ ಹಲವು ದೂರುಗಳು ಬಂದಿವೆ. ಈ ಕುರಿತು ಕೋರ್ಟ್ ಆದೇಶ ಕೂಡ ಇದೆ. ಅದನ್ನ ನಾವು ಪಾಲಿಸಬೇಕು ಎಂದು ತಿಳಿಸಿದರು.

ಇತ್ತೀಚೆಗಷ್ಟೇ ಜಯನಗರದ 4ನೇ ಬ್ಲಾಕ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ಹಠಾತ್ ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ನಡುವೆ ವಾಕ್ಸಸಮರ ನಡೆದಿದ್ದು, ಬಲವಂತವಾಗಿ ಅಧಿಕಾರಿಗಳು ವ್ಯಾಪಾರಿಗಳನ್ನು ತೆರವು ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಬಿಬಿಎಂಪಿ ಅಧಿಕಾರಿಗಳು ಯಾವುದೇ ನೊಟೀಸ್‌ ನೀಡದೆ ಮಾರ್ಷಲ್‌ಗಳನ್ನು ಬಳಸಿಕೊಂಡು 30-40 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಮ್ಮನ್ನು ಬಲವಂತವಾಗಿ ತೆರವು ಮಾಡುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.

ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಿ ಬಿಬಿಎಂಪಿ ಕೊಟ್ಟಿರುವ ಪತ್ರ ನಮ್ಮಲ್ಲಿದೆ. ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರ ನಮಗೆ ಸಾಲವನ್ನು ಕೂಡ ಕೊಡುತ್ತಿದೆ. ಆದರೂ ಬಿಬಿಎಂಪಿಯವರು ನಮಗೆ ತೊಂದರೆ ಕೊಡುತ್ತಿದ್ದಾರೆ. ಮಾರ್ಷಲ್‌ಗಳನ್ನು ಬಳಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com