
ಬೆಂಗಳೂರು: ಬೆಂಗಳೂರಿನ ಶೇ 96 ರಷ್ಟು ರಸ್ತೆಗಳು ಗುಂಡಿ ಮುಕ್ತವಾಗಿವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಹಿಂದೆ ಹೇಳಿದ್ದರು. ಆದರೆ, ವಾಸ್ತವಸ್ಥಿತಿ ಬೇರೆಯಿದ್ದು, ಕಳಪೆ ಕಾಮಗಾರಿಗೆ ನಗರದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ನಗರದ ಶೇ.96ರಷ್ಟು ರಸ್ತೆಗಳು ಗುಂಡಿ ಮುಕ್ತವಾಗಿವೆ. ಉಳಿದ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.
ಆದರೆ, ಜಯಮಹಲ್, ಕೆಂಗೇರಿ, ಮಾರತ್ತಹಳ್ಳಿ ಮತ್ತು ವಸಂತನಗರದ ರಸ್ತೆಗಳು ಗುಂಡಿ ಬಿದ್ದಿದ್ದು, ನೀರು ತುಂಬಿಕೊಂಡು ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಲಿದ್ದಾರೆ.
ಜಯಮಹಲ್, ಕೆಂಗೇರಿ, ಮಾರತ್ತಹಳ್ಳಿ ಮತ್ತು ವಸಂತನಗರ ಅಷ್ಟೇ ಅಲ್ಲ, ನಗರದ ಸಾಕಷ್ಟು ರಸ್ತೆಗಳ ಸ್ಥಿತಿ ಇದೇ ರೀತಿ ಇದೆ. ಅಧಿಕಾರಿಗಳು ಕಾಮಗಾರಿ ಆದೇಶ ಹೊರಡಿಸಿದ್ದರೂ ಡಾಂಬೀಕರಣ ಮಾಡಿಲ್ಲ. ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
5ಕ್ಕೂ ಹೆಚ್ಚು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಆನ್ಲೈನ್ ಮೂಲಕ ಐದಾರು ಬಾರಿ ದೂರು ನೀಡಿದ್ದೇನೆ. ದೂರು ನೀಡಿದಾಗರೆಲವ್ಲೇ ದೂರು ಸಂಖ್ಯೆಯಷ್ಟೇ ದಾಖಲಾಗುತ್ತಿದೆ. ಆದರೆ, ಕ್ರಮವಿಲ್ಲ ಎಂದು ಕೆಂಗೇರಿ ನಿವಾಸಿ ಹಾಗೂ ಶಾಲಾ ಶಿಕ್ಷಕಿ ಮಾಧುರಿ ಎಂಬುವವರು ಹೇಳಿದ್ದಾರೆ.
ಮಾರತ್ತಹಳ್ಳಿಯ ಸಾಫ್ಟ್‌ವೇರ್ ವೃತ್ತಿಪರರಾದ ಗೋಪಿ ಕೃಷ್ಣ ಎಂಬುವವರು ಮಾತನಾಡಿ, ಮೆಟ್ರೊ ರೈಲು ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಗುಂಡಿಗಳು ಸಾಕಷ್ಟಿದ್ದು, ಈ ರಸ್ತೆಗಳು ಪ್ರಯಾಣಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
Advertisement