
ಬೆಂಗಳೂರು: ಮಾದಕ ವಸ್ತು ಜಾಲ ಪತ್ತೆ ಹಾಗೂ ಪೆಡ್ಲರ್ ಗಳ ಪತ್ತೆಗೆ ಖಾಕಿ ಪಡೆ ಮಾಸ್ಟರ್ ಪ್ಲಾನ್ ರೂಪಿಸಿದೆ.
ಮಾದಕ ದ್ರವ್ಯ ಸೇವನೆ ಪ್ರಕರಣಗಳಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವುದನ್ನು ನಿಲ್ಲಿಸಿ, ಅವರನ್ನೇ ಮಾಹಿತಿದಾರರನ್ನಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಇದೇ ವ್ಯಕ್ತಿ ಮತ್ತೆ ಸಿಕ್ಕಿಬಿದ್ದಿದ್ದೇ ಆದರೆ, ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಪೊಲೀಸರ ಈ ಹೊಸ ತಂತ್ರ ಈಗಾಗಲೇ ಕೆಲಸ ಮಾಡಿದೆ ಎನ್ನಲಾಗಿದೆ. ರಾಜ್ಯ ಪೊಲೀಸರು ಕಳೆದ 6 ತಿಂಗಳುಗಲ್ಲಿ 619 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದು, 36 ಮಂದಿ ವಿದೇಶಿ ಪ್ರಜೆಗಳು ಸೇರಿ ಒಟ್ಟು 219 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಮಾದಕ ಸೇವನೆ ಹಾಗೂ ಪೆಡ್ಲರ್ ಗಳ ವಿರುದ್ಧ ಮಾದಕ ದ್ರವ್ಯ ಸೇವನೆ ಮಾಡುವವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್ 27 ಬಿ ಅಡಿಯಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸುತ್ದಿದ್ದು, ಇದರ ಪರಿಣಾಮವಾಗಿ ನ್ಯಾಯಾಲಯವು 10,000 ರೂಪಾಯಿ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.
ನಗರದಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕುವುದು ನಮ್ಮ ಗುರಿಯಾಗಿದೆ. ಮಾದಕ ದ್ರವ್ಯ ಸೇವನೆ ಮಾಡುವವರ ವಿರುದ್ಧ ಪ್ರಕರಣಗಳ ದಾಖಲಿಸದೆ, ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಆದರೆ, ಅವರನ್ನೇ ಮಾಹಿತಿದಾರರನ್ನಾಗಿ ಬಳಕೆ ಮಾಡಿದರೆ, ಪೆಡ್ಲರ್ ಗಳ ಹುಡುಕಾಟ ಸುಲಭವಾಗುತ್ತದೆ. ಇದರಿಂದ ಇಡೀ ನೆಟ್ ವರ್ಕ್'ಗೆ ಕಡಿವಾಣ ಹಾಕಬಹುದಾಗಿದೆ. ಈ ಕ್ರಮದಿಂದಾಗಿ ಕಳೆದ ವರ್ಷದಿಂದ ಡ್ರಗ್ಸ್ ವಶಪಡಿಸಿಕೊಳ್ಳುತ್ತಿರುವುದು ಹಾಗೂ ಪೆಡ್ಲರ್ ಗಳ ಬಂಧನದ ಸಂಖ್ಯೆ ಹೆಚ್ಚಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಹೇಳಿದ್ದಾರೆ.
ಯುವರು ಪ್ರಯೋಗಾರ್ತವಾಗಿಯೂ ಡ್ರಗ್ಸ್ ಸೇವನೆ ಮಾಡುವರು. ಅವರ ವಿರುದ್ಧ ಪ್ರಕರಣ ದಾಖಳಿಸಿದರೆ, ವ್ಯಸನಿ ಅಥವಾ ಪೆಡ್ಲರ್ ಗಳಾಗಿ ಮಾರ್ಪಾಡಾಗಬಹುದು. ಇದರಿಂದ ಅವರ ಜೀವನ ಹಾಳಾಗುತ್ತದೆ. ನಮ್ಮ ಈ ಪ್ರಯೋಗ ಎಲ್ಲರಿಗೂ ಮೇಲೂ ನಡೆಯುವುದಿಲ್ಲ. ಮೊದಲ ಬಾರಿಗೆ ಸಿಕ್ಕಿಹಾಕಿಕೊಂಡವರ ಮೇಲೆ ನಡೆಯುತ್ತದೆ. ಎರಡನೇ ಬಾರಿ ಸಿಕ್ಕಿಹಾಕಿಕೊಂಡವರ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement