ಕೈದಿಗಳಲ್ಲಿ ಭೇದವೇಕೆ?: ನಟ ದರ್ಶನ್ ಮನೆ ಊಟ ಬೇಡಿಕೆ ಅರ್ಜಿ ಕುರಿತು Karnataka High Court ಹೇಳಿಕೆ

ಮನೆ ಊಟ ಪಡೆಯಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
High Court on actor Darshans plea
ನಟ ದರ್ಶನ್ ಮತ್ತು ಹೈಕೋರ್ಟ್
Updated on

ಬೆಂಗಳೂರು: ಮನೆ ಊಟದ ಕುರಿತು Actor Darshan ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ Karnataka High Court, “ಪ್ರತಿಯೊಬ್ಬ ವಿಚಾರಣಾಧೀನ ಕೈದಿಗೂ ಪೌಷ್ಠಿಕಾಂಶಯುಕ್ತ ಆಹಾರ ಬೇಕು. ಇಲ್ಲಿ ಶ್ರೀಮಂತ, ಬಡವ, ಪ್ರಭಾವಿ ಎಂದು ಭೇದಭಾವ ಮಾಡಲಾಗದು ಎಂದು ಹೇಳಿದೆ.

ಮನೆ ಊಟ ಪಡೆಯುವುದಕ್ಕೆ ಅನುಮತಿಸಲು ಪರಪ್ಪನ ಕಾರಾಗೃಹದ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಅರ್ಜಿಯ ಸಂಬಂಧ ಆಗಸ್ಟ್‌ 20ರೊಳಗೆ ನಿರ್ಧರಿಸಿ, ತೀರ್ಮಾನದ ದಾಖಲೆಯನ್ನು ಪೀಠದ ಮುಂದೆ ಮಂಡಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಮನೆ ಊಟ ಪಡೆಯಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

High Court on actor Darshans plea
Renukaswamy Case: ಮನೆ ಊಟ, ಬಟ್ಟೆ, ಬೆಡ್ ಗಾಗಿ ಅನುಮತಿ ಕೋರಿ ನಟ Darshan ಹೊಸ ಅರ್ಜಿ

ದರ್ಶನ್ ಪರ ವಕೀಲರ ವಾದ

ವಿಚಾರಣೆಯಲ್ಲಿ ದರ್ಶನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಜೈಲಿನ ಅಧಿಕಾರಿ ನೀಡಿರುವ ಅಫಿಡವಿಟ್‌ನಲ್ಲಿ ದರ್ಶನ್‌ಗೆ ಪೌಷ್ಟಿಕಾಂಶಯುಕ್ತ ಆಹಾರದ ಅಗತ್ಯವಿದೆ ಎಂದು ಹೇಳಿದ್ದಾರೆ. ಕರ್ನಾಟಕ ಕಾರಾಗೃಹ ಕಾಯಿದೆಯಲ್ಲಿ ವಿಚಾರಣಾಧೀನ ಮತ್ತು ಸಜಾ ಕೈದಿಗಳು ಎಂದು ಮಾತ್ರ ಪ್ರತ್ಯೇಕಿಸಲಾಗಿದೆ. ಕಾಯಿದೆ ಸೆಕ್ಷನ್‌ 30ರ ಪ್ರಕಾರ ಖಾಸಗಿಯಾಗಿ ವಿಚಾರಣಾಧೀನ ಕೈದಿ ಆಹಾರ ತರಿಸಿಕೊಳ್ಳಬಹುದಾಗಿದೆ. ಜೈಲು ಕೈಪಿಡಿಯಲ್ಲಿ ಮನೆಯೂಟ ಪಡೆಯಬಾರದು ಎಂದು ಹೇಳಿಲ್ಲ.

ಆದರೆ, ಆಹಾರ ಪದ್ಧತಿ (ಡಯಟ್‌) ಬಗ್ಗೆ ಹೇಳಲಾಗಿದೆ. ಕಾಯಿದೆಯ ನಿಬಂಧನೆಗೆ ಅನುಗುಣವಾಗಿ ಜೈಲು ಕೈಪಿಡಿ ನೋಡಬೇಕು. ದರ್ಶನ್‌ ಮನೆಯೂಟವನ್ನು ಹಕ್ಕಾಗಿ ಕೇಳುತ್ತಿಲ್ಲ. ಬದಲಿಗೆ ಮನವಿ ಮಾಡುತ್ತಿದ್ದಾರೆ. ಇದನ್ನು ಸರ್ಕಾರ ಪ್ರಶ್ನಿಸಿರುವುದರಿಂದ ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಮುಂದೆಯೂ ನಮ್ಮದು ಮನವಿಯಾಗಿರಲಿದೆ. ಹೀಗಾಗಿ ಜೈಲು ಅಧಿಕಾರಿಯು ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಅನುಗುಣವಾಗಿ ಮನೆ ಊಟ ನೀಡಲು ಅನುಮತಿಸಬೇಕು” ಎಂದರು.

ಅಂತೆಯೇ “ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು ನಮ್ಮ ಕೋರಿಕೆಯನ್ನು ಪರಿಗಣಿಸುವುದಾದರೆ ಅರ್ಜಿಯನ್ನು ಒಂದು ವಾರ ವಿಚಾರಣೆ ಮುಂದೂಡಬಹುದು. ಸರ್ಕಾರ ಮಾನವೀಯತೆಯಿಂದ ದರ್ಶನ್‌ ಅವರನ್ನು ನೋಡುತ್ತದೆ ಎಂದುಕೊಳ್ಳುತ್ತೇನೆ. ದರ್ಶನ್‌ ಅವರನ್ನು ಈಗ ಸೆಲಿಬ್ರಿಟಿ ಎಂದು ಕರೆಯಬೇಡಿ, ಅವರು ಗಂಭೀರ ಆರೋಪ ಎದುರಿಸುತ್ತಿದ್ದಾರೆ. ದರ್ಶನ್‌ ಮನುಷ್ಯನಾಗಿದ್ದು, ದೇಹಕ್ಕೆ ಅಗತ್ಯವಾದ ಆಹಾರ ಬೇಕಿದೆ” ಎಂದರು.

High Court on actor Darshans plea
ನಟ ದರ್ಶನ್ ಜೈಲುಪಾಲು: ಸಂಕಷ್ಟದಿಂದ ಪಾರು ಮಾಡಲು ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ

'ಕೈದಿಗಳಲ್ಲಿ ಭೇದವೇಕೆ?'; ಕೋರ್ಟ್

ಈ ವೇಳೆ ವಿಚಾರಣೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೀಠವು “ಪ್ರತಿಯೊಬ್ಬ ವಿಚಾರಣಾಧೀನ ಕೈದಿಗೂ ಪೌಷ್ಠಿಕಾಂಶಯುಕ್ತ ಆಹಾರ ಬೇಕು. ಇಲ್ಲಿ ಶ್ರೀಮಂತ, ಬಡವ, ಪ್ರಭಾವಿ ಎಂದು ಭೇದಭಾವ ಮಾಡಲಾಗದು. ನಿಜಕ್ಕೂ ದರ್ಶನ್‌ ಆರೋಗ್ಯ ಕ್ಷೀಣಿಸಿದ್ದರೆ ಜೈಲಿನಲ್ಲಿ ವೈದ್ಯರು ಇದ್ದಾರೆ. ಅವರು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದಾರೆ. ಇದು ದರ್ಶನ್‌ ಅಥವಾ ಬೇರಾವುದೇ ವಿಚಾರಣಾಧೀನ ಕೈದಿಯ ವಿಚಾರವಲ್ಲ. ನಾವು ಇಲ್ಲಿ ಹೇಗೆ ಪ್ರತ್ಯೇಕಿಸಿ ನೋಡಲು ಸಾಧ್ಯ? ಪ್ರತಿಯೊಬ್ಬ ವಿಚಾರಣಾಧೀನ ಕೈದಿಗಳೂ ಇಲ್ಲಿನ ಪ್ರಜೆಗಳೇ..." ಎಂದಿತು.

ಅಲ್ಲದೆ, ವಿಚಾರಣೆಯ ಮತ್ತೊಂದು ಸಂದರ್ಭದಲ್ಲಿ ಪೀಠವು, "ನಮ್ಮಲ್ಲಿ ಕೋಟ್ಯಂತರ ವಿಚಾರಣಾಧೀನ ಕೈದಿಗಳಿದ್ದು, ಅವರಿಗೆ ಉತ್ತಮ ಆಹಾರ ಪದ್ಧತಿ ಬೇಕಿದೆ. ಜೈಲಿನ ಮೇಲ್ವಿಚಾರಣಾಧಿಕಾರಿಯು ದರ್ಶನ್‌ಗೆ ಆಯಾಸವಾಗಿದೆ. ಹೀಗಾಗಿ, ಅವರಿಗೆ ವಿರಾಮ ಅಗತ್ಯವಿದೆ ಎಂದು ಹೇಳಿದ್ದಾರೆ. ಜೈಲಿನ ಆಹಾರ ಪದ್ಧತಿಯಂತೆ ದರ್ಶನ್‌ ಅಥವಾ ಇನ್ನಾರಿಗೇ ಆದರೂ ಆಹಾರ ನೀಡಲಾಗುತ್ತದೆ. ದರ್ಶನ್ ಪರಿಸ್ಥಿತಿ ತೀರ ಹದಗೆಟ್ಟು ನ್ಯಾಯಾಲಯದ ಕಡೆ ಬಂದಾಗ ನೋಡಬಹುದು” ಎಂದಿತು.

“ರಾಜ್ಯ ಕಾರಾಗೃಹ ಕಾಯಿದೆ ಸೆಕ್ಷನ್‌ 30ರ ಅಡಿ ಆಹಾರ ನೀಡಬಹುದು ಎಂದಿದೆ. ಆದರೆ, ಅದನ್ನು ಕೈಪಿಡಿ ಮತ್ತು ನಿಯಂತ್ರಣದ ಮೂಲಕ ಜಾರಿಗೊಳಿಸಬಹುದು. ಸರ್ಕಾರವು ದರ್ಶನ್‌ ಬಗ್ಗೆ ಮಾತ್ರವೇ ಏಕೆ, ಎಲ್ಲಾ ವಿಚಾರಣಾಧೀನ ಕೈದಿಗಳ ಬಗ್ಗೆಯೂ ಮಾನವೀಯವಾಗಿ ನಡೆದುಕೊಳ್ಳಬೇಕು. ದರ್ಶನ್‌ ಕೋರಿಕೆಯನ್ನು ಸರ್ಕಾರ ಪರಿಗಣಿಸಬಹುದು. ಇದು ಶ್ರೀಮಂತರಿಗೆ ಮಾತ್ರ ಏಕೆ ಅನ್ವಯ? ನಿಮಗೆ ನೀಡುವುದಾದರೆ ಇತರೆ ಆರೋಪಿಗಳಿಗೆ ಏಕೆ ನೀಡಬಾರದು? ಇಲ್ಲಿ ಶ್ರೀಮಂತ, ಬಡವ, ಪ್ರಭಾವಿ, ರಾಜಕೀಯ ಕೈದಿಗಳು ಎಂಬ ಭಿನ್ನತೆ ಏಕೆ? ಇಲ್ಲಿ ಎಲ್ಲರೂ ವಿಚಾರಣಾಧೀನ ಕೈದಿಗಳು ಎಂದು ಪೀಠ ಹೇಳಿತು.

High Court on actor Darshans plea
'ಯಾವುದೇ ಕಾರಣಕ್ಕೂ ದರ್ಶನ್ ಬಿಟ್ಟು ಕೊಡಬೇಡ ಕಂದ ಎಂದಿದ್ದರು ಅಮ್ಮ; ನಾನು ಈ ಸ್ಥಿತಿಯಲ್ಲಿ ನೋಡಬೇಕಿತ್ತಾ?'

ವಿಶೇಷ ಸರ್ಕಾರಿ ಅಭಿಯೋಜಕರ ವಾದ

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು ವಾದ ಮಂಡಿಸಿ, ''ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ 2022ರ ಕೈಪಿಡಿ ಅನ್ವಯ ಕೈದಿಗಳಿಗೆ ಆಹಾರ ಪೂರೈಸಲಾಗುತ್ತಿದೆ. ದರ್ಶನ್‌ ಮನೆ ಊಟಕ್ಕೆ ಎರಡು ಮನವಿ ಸಲ್ಲಿಸಿದ್ದು, ಎರಡು ವಾರಗಳಲ್ಲಿ ಅವುಗಳಿಗೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ಆದೇಶ ಮಾಡಲಿದೆ” ಎಂದರು.

ವಿಚಾರಣೆ ಮುಂದೂಡಿಕೆ

ಈ ಹಿನ್ನೆಲೆಯಲ್ಲಿ ದರ್ಶನ್‌ ಪರ ವಕೀಲರು ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ಪೀಠವು “ದರ್ಶನ್‌ ಸಲ್ಲಿಸಿರುವ ಎರಡು ಮನವಿಗಳ ಸಂಬಂಧ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡು, ಆ ಸಂಬಂಧದ ದಾಖಲೆಗಳನ್ನು ಆಗಸ್ಟ್‌ 20ರ ಒಳಗೆ ನ್ಯಾಯಾಲಯದ ಮುಂದೆ ಮಂಡಿಸಬೇಕು” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com