
ಬೆಂಗಳೂರು: ನಗರದಲ್ಲಿ ಕಳೆದ ವಾರ 5,000 ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಈ ಪೈಕಿ 3,225 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಶನಿವಾರ ಹೇಳಿದೆ.
ಸುದ್ದಿಗಾರರೊಂದಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಈ ವಾರವೂ 1,500 ಗುಂಡಿಗಳನ್ನು ಗುರುತಿಸಲಾಗಿದ್ದು, ಎಲ್ಲಾ ರಸ್ತೆಗಳನ್ನು ತುಂಬಲು ಮೇ,31ರಂದು ಗಡುವು ನೀಡಲಾಗಿದೆ ಎಂದು ಹೇಳಿದರು.
ಆರ್.ಆರ್.ನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಗುಂಡಿ ತುಂಬಲು ಜೂನ್ 4ಕ್ಕೆ ಗಡುವು ನೀಡಲಾಗಿದೆ. ಈ ಎರಡು ವಲಯಗಳಲ್ಲಿ ಬರೋಬ್ಬರಿ 2,480 ಹಾಗೂ 1,500 ಹೊಸ ಗುಂಡಿಗಳಿದ್ದು, ಪಾಲಿಕೆಯಲ್ಲಿ 3,500 ಗುಂಡಿಗಳು ತುಂಬಬೇಕಿದೆ ಎಂದು ತಿಳಿಸಿದರು.
ಮಳೆಗಾಲ ಆರಂಭಕ್ಕೂ ಮುನ್ನವೇ ನಗರದ ರಸ್ತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ನೋಡಿಕೊಳ್ಳಬೇಕು. ಗುಂಡಿಗಳು ಕಂಡು ಬಂದ ಕೂಡಲೇ ಅವುಗಳನ್ನು ಸರಿಪಡಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗಷ್ಟೇ ಪಾಲಿಕೆಗೆ ಸೂಚಿಸಿದ್ದರು.
ಈ ನಡುವೆ ನಗರದಲ್ಲಿ ಗುಂಡಿಗಳನ್ನು ತುಂಬಿಸಲು ಹಾಗೂ ಹಾಳಾದ ರಸ್ತೆಗಳನ್ನು ಸರಿಪಡಿಸಲು ಪಾಲಿಕೆಗೆ 1000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
Advertisement