
ಬೆಂಗಳೂರು: ಕಗ್ಗದಾಸಪುರ ಕೆರೆ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಂಡಿದ್ದು, ಕಾಮಗಾರಿಯು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
47 ಎಕರೆ ವಿಸ್ತೀರ್ಣದ ಕಗ್ಗದಾಸಪುರ ಕೆರೆಯಲ್ಲಿ ಎರಡೂವರೆ ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಕಳೆ ತೆಗೆಯುವುದು, ನೀರು ತೆಗೆಯುವುದು ಮತ್ತು ಹೂಳು ತೆಗೆಯುವ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ಅಭಿವೃದ್ಧಿ ಕಾಮಗಾರಿ ಕಾರ್ಯ ವೇಗ ಪಡೆದುಕೊಂಡಿದೆ.
ಇದೀಗ ಬಿಬಿಎಂಪಿ ಪುನಃ ಕೆರೆ ಭೂಮಿಗೆ ಬೇಲಿ ಹಾಕುವ ಕೆಲಸ ಮಾಡುತ್ತಿದ್ದು, ಇತರ ಕಾಮಗಾರಿಗಳ ಜೊತೆಗೆ ವಾಕಿಂಗ್ ಟ್ರ್ಯಾಕ್ ಮತ್ತು ಭದ್ರತಾ ಕೊಠಡಿಯನ್ನು ನಿರ್ಮಿಸುತ್ತಿದೆ.
ಇದರ ಹೊರತಾಗಿ, ಬಿಡಬ್ಲ್ಯೂಎಸ್ಎಸ್'ಬಿ 5 ಎಂಎಲ್'ಡಿ ಸಾಮರ್ಥ್ಯದ ಎಸ್'ಟಿಪಿ ಸಹ ನಿರ್ಮಿಸುತ್ತಿದೆ, ಇದು ಕೆಸರನ್ನು ಸಂಸ್ಕರಿಸಲಿದ್ದು, ಎಲ್ಲಾ ಋತುಗಳಲ್ಲಿಯೂ ಕೆರೆಯಲ್ಲಿ ನೀರು ಇರುವುದನ್ನು ಖಚಿತಪಡಿಸುತ್ತದೆ.
ಕಾಮಗಾರಿ ಕುರಿತು ಮಾಹಿತಿ ನೀಡಿರುವ ಸಿ.ವಿ.ರಾಮನ್‌ನಗರದ ಶಾಸಕ ಎಸ್.ರಘು ಅವರು, 8 ಕೋಟಿ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಸ್ಥಳೀಯ ನಿವಾಸಿಗಳು ವಾಕಿಂಗ್ ಟ್ರ್ಯಾಕ್‌ನೊಂದಿಗೆ ಸಂಪೂರ್ಣವಾಗಿ ಪುನಶ್ಚೇತನಗೊಂಡ ಕೆರೆಯನ್ನು ಹೊಸ ವರ್ಷದ ಉಡುಗೊರೆಯಾಗಿ ಪಡೆಯಲಿದ್ದಾರೆಂದು ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಶನಿವಾರ ಕಾಮಗಾರಿ, ಮರ ನೆಡುವ ಅಭಿಯಾನದ ಪ್ರಗತಿಯನ್ನು ವೀಕ್ಷಿಸಲು ಶಾಸಕರೊಂದಿಗೆ ಕೆಲವು ಕಾರ್ಯಕರ್ತರು ಮತ್ತು ನಿವಾಸಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಮಾತನಾಡಿದ ಕಾರ್ಯಕರ್ತರು, ಕೆಲವರು 2020 ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿ ಯೋಜನೆಗೆ ತಡೆಯೊಡ್ಡಿದ್ದರು. ಆದರೆ, 2021 ರಲ್ಲಿ ತಡೆಯಾಜ್ಞೆಯನ್ನು ಹಿಂಪಡೆಯಲಾಗಿತ್ತು. ಆದರೆ ಲಾಕ್‌ಡೌನ್'ನಿಂದಾಗಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿತ್ತು. 2022 ರಿಂದ ಕಾಮಗಾರಿ ಪುನರಾರಂಭವಾಯಿತು. ಈಗ ಸುಮಾರು 65 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿರುವ ಬಿಬಿಎಂಪಿ ಕೆರೆಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಿತ್ಯ ಜೆ ಅವರು ಮಾತನಾಡಿ. ಕಾಮಗಾರಿ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಿಶೇಷ ಆಯುಕ್ತ (ಕೆರೆಗಳು) ಪ್ರೀತಿ ಗೆಹ್ಲೋಟ್ ಅವರಿಗೆ ವರದಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
2.5 ಎಕರೆ ಒತ್ತುವರಿಯಾಗಿದೆ. ಸಮೀಕ್ಷೆಯ ನಂತರ 20 ಖಾಸಗಿ ಅತಿಕ್ರಮಣಗಳು ಪತ್ತೆಯಾಗಿವೆ. ಪಾಲಿಕೆಯು ಸುಮಾರು ಒಂದು ಎಕರೆಯನ್ನು ಪುನಃ ಪಡೆದುಕೊಂಡಿದೆ. ಈಗಾಗಲೇ 22 ಗುಂಟಾ ಪ್ರದೇಶದಲ್ಲಿ ಬೇಲಿ ಹಾಕಲಾಗಿದೆ. ಜಲಕಂಠೇಶ್ವರ ದೇವಸ್ಥಾನ ಪ್ರವೇಶ, ಬೈರಸಂದ್ರ ಪ್ರವೇಶ ಮತ್ತು ಬಾಗ್ಮನೆ ಟೆಕ್ ಪಾರ್ಕ್ ಪ್ರವೇಶ, ಮತ್ತು ಹೂಳು ತೆಗೆಯುವ ಕೆಲಸವು ಹಂತ 1 ರ ಅಡಿಯಲ್ಲಿ ಪೂರ್ಣಗೊಂಡಿದೆ, ಹಂತ 2 ರಲ್ಲಿ, ಉಳಿದ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು
Advertisement