
ಬೆಂಗಳೂರು: ಅಗರ್ತಲಾ-ಎಸ್‌ಎಂವಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಗುತ್ತಿಗೆ ನೌಕರನನ್ನು ರೈಲ್ವೇ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದು, 33 ಲಕ್ಷ ರೂ. ಮೌಲ್ಯದ 32.88 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ರೈಲ್ವೇ ಹೊರಗುತ್ತಿಗೆ ನೌಕರ ದೀಪಕ್ ದಾಸ್ ಎಂದು ಗುರ್ತಿಸಲಾಗಿದ್ದು, ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ನಿಷೇಧಿತ ವಸ್ತುವನ್ನು ರೈಲು ನಂ. 12504 ತ್ರಿಪುರಾದಿಂದ ಬೆಂಗಳೂರು ಬೈಯಪ್ಪನಹಳ್ಳಿ ರೈಲ್ವೇ ಟರ್ಮಿನಲ್ ಗೆ ಸಾಗಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ರೈಲಿನೊಳಗೆ ಪ್ರಯಾಣಿಕರ ಹಾಸಿಗೆ ನೋಡಿಕೊಳ್ಳುತ್ತಿದ್ದ ಗುತ್ತಿಗೆ ನೌಕರ ದೀಪನ್ ದಾಸ್ ಕಿಟ್ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ 32.88 ಕೆಜಿ ಗಾಂಜಾವನ್ನು ಸಿಕ್ಕಿದೆ.
ಈ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ದೀಪತ್ ದಾಸ್ (20) ಶೆಪೈಜಾಲ್ ಜಿಲ್ಲೆಯವರು, ಪ್ರಕರಣ ಸಂಬಂಧ ನಾಪತ್ತೆಯಾಗಿರುವ ತ್ರಿಪುರಾದ ಸುಮನ್ ಮತ್ತು ಬೆಂಗಳೂರಿನ ಬಿಸ್ವಜಿತ್ ಗಾಗಿ ಹುಡುಕಾಟ ಮುಂದುವರೆದಿದೆ.
ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆಯ ಸೆಕ್ಷನ್ 20 ಬಿ (2) ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement