2032ರ ವೇಳೆಗೆ 1 ಟ್ರಿಲಿಯನ್ ಡಾಲರ್‌ ಆರ್ಥಿಕತೆ ಸಾಧಿಸುವ ಗುರಿ: ಸಚಿವ ಎಂ.ಬಿ.ಪಾಟೀಲ್

2032ರ ವೇಳೆಗೆ ರಾಜ್ಯವು ಶೇ.18ರಷ್ಟು ಪ್ರಗತಿ ಸಾಧಿಸುವ ಮೂಲಕ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿ ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಸೋಮವಾರ ಹೇಳಿದರು.
ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್

ಬೆಂಗಳೂರು: 2032ರ ವೇಳೆಗೆ ರಾಜ್ಯವು ಶೇ.18ರಷ್ಟು ಪ್ರಗತಿ ಸಾಧಿಸುವ ಮೂಲಕ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿ ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಸೋಮವಾರ ಹೇಳಿದರು.

54ನೇ ಡಬ್ಲ್ಯುಟಿಸಿಎ ಗ್ಲೋಬಲ್ ಬ್ಯುಸಿನೆಸ್ ಫೋರಂನಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮತ್ತು ಭಾರತದಲ್ಲಿ ಎರಡನೇ ಬಾರಿಗೆ ಸೋಮವಾರ ಆಯೋಜಿಸಲಾಗಿದ್ದ 30 ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ಆರ್ಥಿಕ ಬೆಳವಣಿಗೆಯ ದರವು ಸದ್ಯಕ್ಕೆ ಶೇ.18ರಷ್ಟಿದೆ. ಜಿಡಿಪಿಯಲ್ಲಿ ಕರ್ನಾಟಕವು ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಅಲ್ಲದೆ, ತಲಾವಾರು ಆದಾಯವು ಕಳೆದ 5 ವರ್ಷಗಳಲ್ಲಿ ಶೇ.62ರಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿ 4.0 ಗೆ ಚಾಲನೆ ನೀಡಿದ್ದು, ಕೈಗಾರಿಕಾ ವಲಯದಲ್ಲಿ ತೀವ್ರ ಅಭಿವೃದ್ಧಿ ನಿರೀಕ್ಷಿಸಿದ್ದೇವೆ ಎಂದು ಹೇಳಿದರು.

ಸರ್ಕಾರಿ ಮತ್ತು ಖಾಸಗಿ ವಲಯದ ಉತ್ಪಾದಕರಿಗೆ ಸರಕಾರದ ವತಿಯಿಂದ ಭೂಮಿ ಮತ್ತು ಇನ್ನಿತರ ಮೂಲಸೌಲಭ್ಯಗಳನ್ನು ಸುಗಮವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಕ್ರಾಂತಿಗೆ ನೆರವಾಗಲು ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕುಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಎಲ್ಲ ಜಾಗಗಳಿಗೆ ಬಂದರು, ರೈಲು ಅಥವಾ ವೈಮಾನಿಕ ಸಂಪರ್ಕಗಳನ್ನು ಒದಗಿಸಿ ಪೂರೈಕೆ ಸರಪಳಿಯನ್ನು ಉತ್ತಮಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಎಂ.ಬಿ.ಪಾಟೀಲ್
2030ರ ವೇಳೆಗೆ ಕೆಎಸ್ ಡಿಎಲ್ 5,000 ಕೋಟಿ ವಹಿವಾಟಿನ ಗುರಿ- ಎಂಬಿ ಪಾಟೀಲ್

ಬೆಂಗಳೂರು ನಗರ ಇಡೀ ಜಾಗತಿಕ ಸಮುದಾಯಕ್ಕೆ ಪ್ರತಿಭಾವಂತ ಮಾನವ ಸಂಪನ್ಮೂಲ ಒದಗಿಸುವ ತೊಟ್ಟಿಲಾಗಿದೆ. ವಿಶೇಷವಾಗಿ ಆಟೋಮೇಶನ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಿಗೆ ಸರಕಾರವು ಒತ್ತು ಕೊಡುತ್ತಿದೆ. ಇದಲ್ಲದೆ ಶುದ್ಧ ಇಂಧನ ನೀತಿ, ಮರುಬಳಕೆ ಇಂಧನಗಳ ಕ್ಷೇತ್ರ, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಜೈವಿಕ ತಂತ್ರಜ್ಞಾನ ಮತ್ತು ಅದರ ರಫ್ತು, ಎಲೆಕ್ಟ್ರಾನಿಕ್ ವಿನ್ಯಾಸ ಮತ್ತು ಸಂಶೋಧನೆ, ನಾವೀನ್ಯತೆ ಕ್ಷೇತ್ರಗಳಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಬೆಂಗಳೂರು ನಗರವು ಜಗತ್ತಿನಲ್ಲಿ 4ನೇ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ತಾಣ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮಾತನಾಡಿ, ಹವಾಮಾನ ಬದಲಾವಣೆ, ಆರೋಗ್ಯ, ಭದ್ರತೆ ಮತ್ತು ಅಭಿವೃದ್ಧಿಯ ಜಾಗತಿಕ ಸವಾಲುಗಳನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಅನುಭವವನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧರಿದ್ದೇವೆ. ಐಟಿ, ಸ್ಟಾರ್ಟ್‌ಅಪ್‌ಗಳು, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಕೃಷಿ ಕ್ಷೇತ್ರಗಳಲ್ಿ ನವೋದ್ಯಮಿಗಳಾಗಿ ಸ್ಥಾನ ಪಡೆದಿರುವುದಕ್ಕೆ ಹೆಮ್ಮೆಪಡುತ್ತೇವೆ. ಬೆಂಗಳೂರನ್ನು ಸ್ಮಾರ್ಟ್, ಸುಸ್ಥಿರ ಮತ್ತು ವಾಸಯೋಗ್ಯ ನಗರವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆಂಗು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com