ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ; ಸಿಎಂ ಅಧ್ಯಕ್ಷತೆಯಲ್ಲಿ ನಾಳೆ ಸಭೆ, ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ ಕಿಡಿ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. ಸಂಬಂಧಪಟ್ಟವರು ಅಗತ್ಯ ಮಾಹಿತಿಯೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ನಾಳೆ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. ಸಂಬಂಧಪಟ್ಟವರು ಅಗತ್ಯ ಮಾಹಿತಿಯೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ.

ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ. ನಗರದಲ್ಲಿ ನೀರಿನ ಕೊರತೆಯಿಲ್ಲ. ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಅನುಮತಿ ನೀಡುವಂತೆ ಕೇಳಲಿ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅಂತಹ ನೀರಿನ ಕೊರತೆ ಇಲ್ಲ, ಬಿಜೆಪಿಯವರು ಕೊರತೆಯನ್ನು ಸೃಷ್ಟಿಸಿದ್ದಾರೆ. ನಾವು ತಮಿಳುನಾಡಿಗೆ ಕಾನೂನಾತ್ಮಕವಾಗಿ ಕೇಳಿದ್ದಷ್ಟು ನೀರನ್ನು ಮಾತ್ರ ನೀಡುತ್ತಿದ್ದೇವೆ. ಬೆಂಗಳೂರಿಗೆ ನೀರು ಕೊಡುವುದು ನಮ್ಮ ಆದ್ಯತೆ. ನಗರದಲ್ಲಿ ಸುಮಾರು 7 ಸಾವಿರ ಬೋರ್‌ವೆಲ್‌ಗಳು ಸ್ಥಗಿತಗೊಂಡಿದ್ದು, ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಪ್ರಾತಿನಿಧಿಕ ಚಿತ್ರ
Water crisis: 16 ಸಾವಿರ ಪೈಕಿ 7 ಸಾವಿರ ಬೋರ್ ವೆಲ್ ಗಳು ಸ್ಥಗಿತ, ಹೊಸ ಸಂಪರ್ಕಕ್ಕೆ ಅನುಮತಿ ಕಡ್ಡಾಯ: ಡಿಸಿಎಂ ಡಿಕೆ ಶಿವಕುಮಾರ್

ನಗರದಲ್ಲಿ ಟ್ಯಾಂಕರ್ ಮಾಲೀಕರು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ನಿರಂತರ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ಗುರುವಾರ (ಮಾರ್ಚ್ 7ರಂದು) ಟ್ಯಾಂಕರ್ ನೀರಿನ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಮತ್ತೊಂದೆಡೆ ನಗರದಲ್ಲಿ 3,500 ಖಾಸಗಿ ಟ್ಯಾಂಕರ್‌ಗಳಿದ್ದು, ಬಹುತೇಕರು ಉದ್ದಿಮೆ ಪರವಾನಗಿ ಪಡೆದಿಲ್ಲ. ಹಾಗಾಗಿ, ಎಲ್ಲ ಖಾಸಗಿ ನೀರಿನ ಟ್ಯಾಂಕರ್‌ಗಳ ಮಾಲೀಕರು ಮಾ.1 ರಿಂದ 7ರೊಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿತ್ತು.

ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ ಕಿಡಿ

ಬೆಂಗಳೂರಿನ ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಧ್ಯಾಹ್ನ ಸಭೆ ಕರೆದಿದ್ದಾರೆ. ಬರಗಾಲವಿದೆ ಎಂದು ಗೊತ್ತಿದ್ದರೂ ಕಳೆದ ಆರೇಳು ತಿಂಗಳಿಂದ ಯಾವುದೇ ಮುಂಜಾಗ್ರತೆ ವಹಿಸದೆ, ಪರ್ಯಾಯ ಮಾರ್ಗಗಳನ್ನು ಹುಡುಕದೆ ಕಾಲಹರಣ ಮಾಡಿದ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯೇ ಇಂದಿನ ಸಮಸ್ಯೆಗೆ ಕಾರಣ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಳೆ ಕರೆದಿರುವ ಸಭೆಯೂ ಸಹ ಕೇವಲ ಕಾಟಾಚಾರಕ್ಕೆ ನಡೆಯುವ ಮತ್ತೊಂದು ನಾಮಕಾವಸ್ತೆ ಸಭೆ ಆಗದಿರಲಿ ಎನ್ನುವ ಉದ್ದೇಶದಿಂದ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇನೆ ಎಂದಿದ್ದಾರೆ.

1. ಟ್ಯಾಂಕರ್‌ಗಳ ನೋಂದಣಿಗೆ ನೀಡಲಾಗಿದ್ದು ಗಡುವು ಮುಕ್ತಾಯವಾಗಿ ಎರಡು ದಿನ ಕಳೆದಿದ್ದರೂ, ಇನ್ನೂ ಟ್ಯಾಂಕರ್‌ಗಳ ನೋಂದಣಿ ಪೂರ್ತಿಯಾಗಿಲ್ಲ. ಬೆಂಗಳೂರಲ್ಲಿ 3,500ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್‌ಗಳಿವೆ. ಆದರೆ, ನೋಂದಣಿಯಾಗಿರುವುದು ಕೇವಲ 1,700 ಮಾತ್ರ. ಅಂದರೆ ಶೇ 50ಕ್ಕೂ ಹೆಚ್ಚು ಟ್ಯಾಂಕರ್‌ಗಳು ಇನ್ನೂ ನೋಂದಣಿ ಆಗಿಲ್ಲ. ಟ್ಯಾಂಕರ್ ಮಾಫಿಯಾ, ಸುಲಿಗೆಗೆ ಕಡಿವಾಣ ಹಾಕಬೇಕಾದರೆ ಕಡ್ಡಾಯವಾಗಿ ಯಾವುದೇ ಮುಲಾಜಿಲ್ಲದೆ ಎಲ್ಲಾ ಟ್ಯಾಂಕರ್‌ಗಳ ನೋಂದಣಿ ಮಾಡಿಸಬೇಕು.

2. ಜಲಮಂಡಳಿ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಕಡ್ಡಾಯ ಎಂಬ ನಿಯಮ ಇದ್ದರೂ, ಇನ್ನೂ ಹಲವಾರು ಕಡೆ ಸ್ಟಿಕ್ಕರ್ ಅಂಟಿಸಿಲ್ಲ. ಸ್ಟಿಕ್ಕರ್ ಇಲ್ಲದಿದ್ದರೆ ನೀರಿನ ದುರ್ಬಳಕೆ ಆಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಕಡ್ಡಾಯವಾಗಿ ಸ್ಟಿಕ್ಕರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು.

3. ನೋಂದಣಿಗೊಂಡಿರುವ ಖಾಸಗಿ ಟ್ಯಾಂಕರ್‌ಗಳಿಗೆ ವಿಶೇಷ ಸಂಖ್ಯೆ ನೀಡಿ, ಗುರುತಿನ ಚೀಟಿ ಅಂಟಿಸಬೇಕು. ಜಿಲ್ಲಾಡಳಿತ ನೀಡಿರುವ ದರ ಪಟ್ಟಿ ಹಾಗೂ ದೂರು ಸಂಖ್ಯೆಯನ್ನು ಟ್ಯಾಂಕರ್‌ಗಳ ಮೇಲೆ ಕಡ್ಡಾಯವಾಗಿ ನಮೂದಿಸಬೇಕು.

4. ಅಕ್ರಮ ತಡೆಯಲು ಟ್ಯಾಂಕರ್‌ಗಳಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಬೇಕು. ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು.

ಪ್ರಾತಿನಿಧಿಕ ಚಿತ್ರ
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: BBMP, BWSSB ಭರವಸೆಗಳು ಕೇವಲ ಪ್ರಚಾರದ ಸ್ಟಂಟ್

5. ಸಾರ್ವಜನಿಕರಿಗೆ ನೀಡಿರುವ ಜಲಮಂಡಳಿ/ ಬಿಬಿಎಂಪಿ ಸಹಾಯವಾಣಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು, ಖಾಸಗಿ ಕಾಲ್ ಸೆಂಟರ್ ತೆರೆಯುವ ಮೂಲಕ ಜಲಮಂಡಳಿ ಸಹಾಯವಾಣಿಯನ್ನು ಜನಸ್ನೇಹಿ ಮಾಡಲು ಕ್ರಮಕೈಗೊಳ್ಳಬೇಕು.

6. ಕೇವಲ ಬೆಂಗಳೂರಿನ ಹೃದಯ ಭಾಗ ಮತ್ತು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರವಲ್ಲದೆ ಬಿಬಿಎಂಪಿ ಹೊರವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿನ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಕೂಡ ವಿಶೇಷ ಗಮನ ಹರಿಸಬೇಕು.

ಸರ್ಕಾರ ಸಮರೋಪಾದಿಯಲ್ಲಿ ಈ ಮೇಲಿನ ಕ್ರಮಗಳನ್ನು ಜಾರಿ ಮಾಡಿದರೆ ಮಾತ್ರ ನಾಳಿನ ಸಭೆಯಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ, ಟಾರ್ಗೆಟ್ ಹಾಗೂ ಕಾಲಮಿತಿ ನಿಗದಿ ಮಾಡಲು ಸಾಧ್ಯ. ಇಲ್ಲವಾದರೆ ಇದು ಮತ್ತೊಂದು ಕಾಟಾಚಾರದ ಸಭೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com