ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

10ನೇ ಕ್ಲಾಸ್ ಬಾಲಕನಿಗೆ ಆನ್'ಲೈನ್ ಗೇಮ್ ಚಟ: ಇದನ್ನೇ ಬಂಡವಾಳ ಮಾಡಿಕೊಂಡ ಸ್ನೇಹಿತರು; 41 ಲಕ್ಷ ರೂ. ಸುಲಿಗೆ!

ಆನ್'ಲೈನ್ ಗೇಮ್ ಚಟದ ಕುರಿತು ಪೋಷಕರಿಗೆ ಹೇಳುವುದಾಗಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ರೂ.40 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆತನ ಇಬ್ಬರು ಸಹಪಾಠಿಗಳು ಸೇರಿದಂತೆ 6 ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Published on

ಬೆಂಗಳೂರು: ಆನ್'ಲೈನ್ ಗೇಮ್ ಚಟದ ಕುರಿತು ಪೋಷಕರಿಗೆ ಹೇಳುವುದಾಗಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ರೂ.40 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆತನ ಇಬ್ಬರು ಸಹಪಾಠಿಗಳು ಸೇರಿದಂತೆ 6 ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳನ್ನು ಗಂಗಾವತಿ ಮೂಲದ ಕಾರ್ತಿಕ್, ಸುನೀಲ್ ಮತ್ತು ರಾಜರಾಜೇಶ್ವರಿನಗರದ ವೇಮನ್, ಕೆಂಗೇರಿ ನಿವಾಸಿ ವಿವೇಕ್ ಎಂದು ಗುರ್ತಿಸಲಾಗಿದೆ. ಮತ್ತೊಬ್ಬ ಸಂತ್ರಸ್ತ ಬಾಲಕನ ಸಹಪಾಠಿಯಾಗಿದ್ದಾನೆ. ಆರೋಪಿಗಳಿಂದ 302 ಗ್ರಾಂ ಚಿನ್ನಾಭರಣ ಮತ್ತು 23.50 ಲಕ್ಷ ರೂ. ಜಪ್ತಿ ಮಾಡಲಾಗಿದೆ.ಇಬ್ಬರು ಅಪ್ರಾಪ್ತರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆರ್.ಆರ್. ನಗರದ ಐಡಿಯಲ್ ಹೋಮ್‌ನಲ್ಲಿ ನೆಲೆಸಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಪುತ್ರ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದ. ಆತನ ಜೊತೆಯಲ್ಲಿಯೇ ಮತ್ತಿಬ್ಬರು ಸ್ನೇಹಿತರು ವ್ಯಾಸಂಗ ಮಾಡುತ್ತಿದ್ದರು. ಸಂತ್ರಸ್ತ ಬಾಲಕ ಪಬ್‌ಜೀ, ಡ್ರೀಮ್-11 ಮತ್ತು ಬಿಜಿಎಂಐ ಗೇಮ್ ವ್ಯಸನಿಯಾಗಿ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದ. ಈ ವಿಚಾರವನ್ನು ಆತನ ತಂದೆ-ತಾಯಿಗೆ ಹೇಳುವುದಾಗಿ ಸಹಪಾಠಿಗಳು ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಒಡ್ಡಿದ್ದರು.

ಸಂಗ್ರಹ ಚಿತ್ರ
ಲಂಡನ್‌ ನಲ್ಲಿ ಲಾಂಗ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ: 13 ವರ್ಷದ ಬಾಲಕ ಸಾವು; ವ್ಯಕ್ತಿ ಬಂಧನ

ಪಾಲಕರಿಗೆ ಹೆದರಿ ಸಂತ್ರಸ್ತ ಬಾಲಕ, ತನ್ನ ಮನೆಯಿಂದ ಹಣ ಕದ್ದು ತಂದು ಕೊಡುತ್ತಿದ್ದ. ಹಣ ಸಿಗದೆ ಇದ್ದಾಗ ಚಿನ್ನಾಭರಣ ತಂದು ಕೊಡುವಂತೆ ಆರೋಪಿಗಳು ಹೆದರಿಸಿದ್ದರು. ಕಳೆದ 6 ತಿಂಗಳಲ್ಲಿ 700 ಗ್ರಾಂ ಚಿನ್ನಾಭರಣ ತಂದುಕೊಟ್ಟಿದ್ದ. ಈ ಚಿನ್ನವನ್ನು ಬಾಲಕರು ತಮಗೆ ಪರಿಚಯವಿದ್ದ ವೇಮನ್ ಮತ್ತು ವಿವೇಕ್ ಮೂಲಕ ಕಾರ್ತಿಕ್ ಮತ್ತು ಸುನೀಲ್‌ಗೆ ಮಾರಾಟ ಮಾಡಿಸಿದ್ದರು. ಅದರಲ್ಲಿ ಬಂದ ಹಣದಲ್ಲಿ ಆರೋಪಿಗಳು ಮೋಜುಮಸ್ತಿ ಮಾಡುತ್ತಿದ್ದರು. ಇತ್ತೀಚೆಗೆ ಮನೆಯಲ್ಲಿ ಚಿನ್ನಾಭರಣ ಕಾಣಿಯಾಗಿರುವ ಬಗ್ಗೆ ಅನುಮಾನ ಬಂದು ಪಾಲಕರು, ಪುತ್ರನನ್ನು ಪ್ರಶ್ನಿಸಿದಾಗ ವಿಷಯ ಹೊರಬಂದಿದೆ.

ಈ ಕುರಿತು ಸಂತ್ರಸ್ತ ಬಾಲಕನ ಪಾಲಕರು, ರಾಜರಾಜೇಶ್ವರಿನಗರ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ಬಾಲಕರನ್ನು ವಿಚಾರಣೆ ಮಾಡಿದಾಗ ಸತ್ಯಾಂಶ ಒಪ್ಪಿಕೊಂಡಿದ್ದರು. ಇವರು ಕೊಟ್ಟ ಸುಳಿವಿನ ಮೇರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಾರ್ತಿಕ್ ಮತ್ತು ಸುನೀಲ್‌ನನ್ನು ಬಂಧಿಸಲಾಗಿದೆ. ಮತ್ತಿಬ್ಬರನ್ನು ಆರ್.ಆರ್.ನಗರ ಮತ್ತು ಕೆಂಗೇರಿಯಲ್ಲಿ ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com