ಮಳೆ ಬೆನ್ನಲ್ಲೇ ಡೆಂಗ್ಯೂ ಹೆಚ್ಚಳ: ರಾಜ್ಯದಲ್ಲಿ 2,800 ಕ್ಕೂ ಹೆಚ್ಚು ಕೇಸ್ ಗಳು ಪತ್ತೆ!

ಬಿಸಿಲ ಝಳದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ವರುಣರಾಯನ ಆಗಮನವಾಗಿದ್ದು, ಇದರ ಬೆನ್ನಲ್ಲೇ ಇದೀಗ ಡೆಂಗ್ಯೂ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಮೇ.13ರವರೆಗೆ ಒಟ್ಟು 2,877 ಪ್ರಕರಣ ವರದಿಯಾಗಿವೆ.
ಡೆಂಗ್ಯೂ ಜ್ವರ
ಡೆಂಗ್ಯೂ ಜ್ವರ

ಬೆಂಗಳೂರು: ಬಿಸಿಲ ಝಳದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ವರುಣರಾಯನ ಆಗಮನವಾಗಿದ್ದು, ಇದರ ಬೆನ್ನಲ್ಲೇ ಇದೀಗ ಡೆಂಗ್ಯೂ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಮೇ.13ರವರೆಗೆ ಒಟ್ಟು 2,877 ಪ್ರಕರಣ ವರದಿಯಾಗಿವೆ.

ಕಳೆದ ವರ್ಷ ಇದೇ ಅವಧಿಯಲ್ಲಿ 1,725 ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ನಿಯಂತ್ರಣ ಕ್ರಮಗಳ ತೀವ್ರಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಇಲಾಖೆಯು ಎನ್‌ಎಚ್‌ಎಂನ ಮಿಷನ್ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (ಡಿಎಚ್‌ಒ) ಮತ್ತು ರೋಗ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆಗಳು ನಡೆಸುವುದರ ಜೊತೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದಲ್ಲದೆ, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಮನೆ-ಮನೆಗೆ ಭೇಟಿ ನೀಡುವುದು, ಜಿಲ್ಲಾ ಆಸ್ಪತ್ರೆಗಳಲ್ಲಿ ದೃಢಪಟ್ಟ ಡೆಂಗ್ಯೂ ಪ್ರಕರಣಗಳ ಮೇಲ್ವಿಚಾರಣೆ, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳು ಮತ್ತು ಪರೀಕ್ಷಾ ಕಿಟ್‌ಗಳು ಮತ್ತು ಚಿಕಿತ್ಸಾ ಔಷಧಿಗಳ ಲಭ್ಯತೆಯನ್ನು ಪರೀಶೀಲನೆ ನಡೆಸಲಾಗುತ್ತಿದೆ.

ಡೆಂಗ್ಯೂ ಎಂಬುದು ವಿಶೇಷವಾಗಿ ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಇದು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಮತ್ತು ಮನುಷ್ಯನ ಆರೋಗ್ಯ ಅತ್ಯಂತ ಮಾರಕವಾಗಿರುವುದು ಡೆಂಗ್ಯೂ ಜ್ವರ. ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಜ್ವರದ ಲಕ್ಷಣಗಳನ್ನು ತೋರಿಸುತ್ತದೆ.

ಡೆಂಗ್ಯೂ ಜ್ವರ
West Nile fever: ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಪತ್ತೆ; ಮೈಸೂರು ಸೇರಿ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ!

ಮೈ ಬಿಸಿ (ತಾಪಮಾನ) ಹೆಚ್ಚಾಗುವುದು, ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು, ದದ್ದು ಮತ್ತು ಸೌಮ್ಯ ರಕ್ತಸ್ರಾವ. ಕೆಲವು ಸಂದರ್ಭಗಳಲ್ಲಿ ಇದು ಡೆಂಗ್ಯೂ ಹೆಮರಾಜಿಕ್ ಜ್ವರ ಎಂಬ ತೀವ್ರವಾದ ರೂಪಕ್ಕೆ ತಿರುಗಿ ಜೀವಕ್ಕೆ ಅಪಾಯಕಾರಿಯಾಗಬಹುದು. ಡೆಂಗ್ಯೂಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಆದರೆ ರೋಗಲಕ್ಷಣಗಳ ಬೆಂಬಲ ಮತ್ತು ನಿರ್ವಹಣೆ ಮುಖ್ಯವಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಕಡಿಮೆ ಮಾಡುವುದು ಮತ್ತು ಸೊಳ್ಳೆ ಕಡಿತದಿಂದ ರಕ್ಷಣೆ ಮಾಡಿಕೊಳ್ಳುವುದು ಮಹತ್ವದ ವಿಷಯಗಳಾಗಿವೆ. ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರತಿ ವರ್ಷ ಡೆಂಗ್ಯೂ ಜ್ವರದ ಸೋಂಕಿಗೆ ಗುರಿಯಾಗುತ್ತಿದ್ದಾರೆ.

ಡೆಂಗ್ಯೂವಿನಿಂದ ದೂರ ಉಳಿಯಲು ಸೊಳ್ಳೆ ಕಚ್ಚದಂತೆ ಸದಾ ಎಚ್ಚರವಹಿಸಬೇಕು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಬಹಳ ಉತ್ತಮ. ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಬೇಕು. ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಲು ಮೈ ತುಂಬಾ ಬಟ್ಟೆ ಧರಿಸಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com