
ಬೆಂಗಳೂರು: ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಾವು ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಗುರುವಾರದಿದ ಮಾವು ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಆದರೆ, ಸೀಮಿತ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಿರುವುದು ರೈತರು ಹಾಗೂ ವ್ಯಾಪಾರಸ್ಥರಲ್ಲಿ ಬೇಸರವನ್ನು ತರಿಸಿದೆ.
ಈ ವರ್ಷ ಮಳೆ ಇಲ್ಲದ ಕಾರಣ ನಿರೀಕ್ಷಿತ ಮಾವು ಫಸಲು ಸಿಕ್ಕಿಲ್ಲ. ಆದರೂ ಸಿಕ್ಕ ಫಸಲಿನ ಮಾವನ್ನು ಮೇಳದಲ್ಲಿ ಮಾರಾಟ ಮಾಡುವ ಉತ್ಸುಕದಲ್ಲಿ ರೈತರಿದ್ದರು. ಆದರೆ, ಅಧಿಕಾರಿಗಳು ಸೀಮಿತ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಿರುವುದು ರೈತರಲ್ಲಿ ಬೇಸರವನ್ನು ತರಿಸಿದೆ.
ನೀರಿನ ಕೊರತೆ, ಅತೀವ್ರ ಬಿಸಿಲು ಸೇರಿದಂತೆ ಹಲವು ಅಂಶಗಳಿಂದ ಈ ವರ್ಷ ಇಳುವರಿ ಕಳಪೆಯಾಗಿದೆ. ಇದು ಈ ವರ್ಷ ವ್ಯಾಪಾರದ ಮೇಲೆ ಗಣನೀಯ ಪರಿಣಾಮ ಬೀರಿದೆ ಎಂದು ಹಲವು ರೈತರು ಅಳಲು ತೋಡಿಕೊಂಡಿದ್ದಾರೆ.
ಮಾವು ಮಾರಾಟಗಾರರಾದ ಲಿಂಗರಾಜು ಅವರು ಮಾತನಾಡಿ, “ಮಾವಿನ ಹಣ್ಣುಗಳು ಋತುಮಾನದ ಅಚ್ಚುಮೆಚ್ಚಿನ ಹಣ್ಣಾಗಿದ್ದರೂ. ಸಾಮಾನ್ಯವಾಗಿ ಬೆಲೆ ಸ್ವಲ್ಪ ಹೆಚ್ಚಿದ್ದರೂ ಸಹ ಗ್ರಾಹಕರು ಈ ಹಣ್ಣನ್ನು ಖರೀದಿಸುತ್ತಾರೆ. ಆದರೆ, ಈ ವರ್ಷ, ಇಳುವರಿ ಉತ್ತಮವಾಗಿಲ್ಲ. ಹವಾಮಾನ ಪರಿಸ್ಥಿತಿಗಳಿಂದಾಗಿ ಹಣ್ಣುಗಳು ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯವಾಗಿಲ್ಲ, ಪ್ರಕ್ರಿಯೆಯಲ್ಲಿ ಬಹಳಷ್ಟು ಹಣ್ಣುಗಳು ಹಾಳಾಗುತ್ತವೆ. ಈ ವರ್ಷ ಮಾವಿನ ತಳಿಗಳ ಬಗ್ಗೆ ಗ್ರಾಹಕರು ಹೆಚ್ಚು ಸಂತಸಗೊಂಡಿಲ್ಲ ಎಂದು ಹೇಳಿದ್ದಾರೆ.
ತುಮಕೂರಿನ ಮತ್ತೊಬ್ಬ ವರ್ತಕ ರಾಮಕೃಷ್ಣ ಮಾತನಾಡಿ, ಈ ವರ್ಷ ಮಾರಾಟಗಾರರು ಹೆಚ್ಚಾಗಿದ್ದು, ಇಳುವರಿ ಕಡಿಮೆಯಾಗಿದೆ. ಎಲ್ಲರೂ ಒಂದೇ ರೀತಿಯ ಮಾವಿನ ಹಣ್ಣಿನಿಂದ ಲಾಭ ಗಳಿಸಲು ಬಯಸುತ್ತಾರೆ. ಮಾವು ಮೇಳ ಆಯೋಜಿಸುತ್ತಿರುವ ಅಧಿಕಾರಿಗಳಿಗೆ ಈ ವರ್ಷದ ಇಳುವರಿ ಸ್ಥಿತಿಗತಿ ಗೊತ್ತಿದೆ. ಅಧಿಕಾರಿಗಳು ಮಳಿಗೆಗಳನ್ನು ವಿಸ್ತರಿಸಬೇಕು. ಅಂತಿಮವಾಗಿ ಎಲ್ಲರಿಗೂ ಪ್ರಯೋಜನಕಾರಿಯಾಗುವಂತೆ ಯೋಜನೆಯನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.
ಮೇಳ ಪ್ರಾರಂಭವಾದ ನಂತರ ಗ್ರಾಹಕರು ರಿಯಾಯಿತಿ ದರದಲ್ಲಿ ಉತ್ತಮ ವಿಧಧ ಹಣ್ಣುಗಳನ್ನು ಕಂಡುಕೊಳ್ಳುತ್ತಾರೆ. ಮೇಳಕ್ಕೆ ಬರುವ ಜನರು ದೊಡ್ಡ ಪ್ರಮಾಣದಲ್ಲಿ ಹಣ್ಮುಗಳನ್ನು ಖರೀದಿಸುತ್ತಾರೆ. ಆದರೆ. ಮಾವು ಮೇಳದಲ್ಲಿ ಮಳಿಗೆ ಹಾಕಲು ನಮಗೆ ಅವಕಾಶ ಸಿಕ್ಕಿಲ್ಲ. ನಮ್ಮ ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ.
ವಾರ್ಷಿಕವಾಗಿ ಆಯೋಜಿಸುವ ಈ ಮೇಳದಿಂದ ರಾಜ್ಯದ ರೈತರ ಒಂದು ಭಾಗ ಮಾತ್ರ ಪ್ರಯೋಜನ ಪಡೆಯುತ್ತದೆ. ಕೆಲವು ನಿರ್ದಿಷ್ಟ ಪ್ರದೇಶದ ರೈತರಿಗೆ ಮಾತ್ರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ ಹೀಗಿರುವಾಕ ಮೇಳ ಆಯೋಜಿಸುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವುದರಿಂದ ನಾವು ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣಿಸುತ್ತೇವೆ. ನಮ್ಮ ಮಾವಿಗೆ ಇಲ್ಲಿ ಆದ್ಯತೆ ನೀಡದಿದ್ದರೆ, ನಾವು ಬೇರೆಲ್ಲಿ ಹೋಗಾವುದು? ಎಂದು ಮತ್ತೊಬ್ಬ ರೈತರು ಪ್ರಶ್ನಿಸಿದ್ದಾರೆ.
ಸ್ಥಳೀಯ ಸಹಭಾಗಿತ್ವವನ್ನು ಹೆಚ್ಚಿಸಲು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಮತ್ತು ತೋಟಗಾರಿಕಾ ಇಲಾಖೆಯು ಎಲ್ಲಾ ಮಳಿಗೆಗಳನ್ನು ರಾಜ್ಯದ ರೈತರು ಮತ್ತು ವ್ಯಾಪಾರಿಗಳಿಗೆ ಮಾತ್ರ ನೀಡಲು ನಿರ್ಧರಿಸಿದೆ.
ಈ ಬಾರಿಯ ಮೇಳದಲ್ಲಿ ಸುಮಾರು 60 ಮಳಿಗೆಗಳಿದ್ದು, ಇವೆಲ್ಲವೂ ಕರ್ನಾಟಕದ ರೈತರಿಗೆ ಮಾತ್ರ ನೀಡಲಾಗುತ್ತಿದೆ. ಈ ಮಳಿಗೆಗಳಲ್ಲಿ ಸುಮಾರು 15 ಬಗೆಯ ಹಲಸಿನ ಹಣ್ಣುಗಳನ್ನೂ ಒಳಗೊಂಡಿರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement