BBMP 46 ಸಾವಿರ ಕೋಟಿ ರೂ ದುರ್ಬಳಕೆ ಆರೋಪ: ಪತ್ರಿಕಾಗೋಷ್ಠಿ ವೇಳೆ ಬಿಜೆಪಿ ನಾಯಕ ಪೊಲೀಸರ ವಶಕ್ಕೆ!

2013-14 ರಿಂದ 2023-24ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಜಂಟಿ ಆಯುಕ್ತರು ಸೇರಿದಂತೆ 90 ಅಧಿಕಾರಿಗಳು ಮತ್ತು 18 ಐಎಎಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
BJP Leader N R Ramesh
ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌
Updated on

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆಯಾಗಿರುವ 46,300 ಕೋಟಿ ರು. ಅನುದಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.

ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ ಬಳಿಕ ಪಾಲಿಕೆ ಆವರಣದಲ್ಲಿ ರಮೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಾಲಿಕೆಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಈ ಬೃಹತ್ ಹಗರಣದ ತನಿಖೆಯನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.

2013-14 ರಿಂದ 2023-24ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಜಂಟಿ ಆಯುಕ್ತರು ಸೇರಿದಂತೆ 90 ಅಧಿಕಾರಿಗಳು ಮತ್ತು 18 ಐಎಎಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೇ, ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ಗುತ್ತಿಗೆದಾರರ ವಿರುದ್ಧವೂ ಸಹ ದೂರು ನೀಡಲಾಗಿದೆ. ಹಗರಣ ಕುರಿತು ಸಂಪೂರ್ಣ ತನಿಖೆ ನಡೆಸಿದರೆ ಅನುದಾನ ದುರ್ಬಳಕೆ ಕುರಿತು ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

BJP Leader N R Ramesh
ನಡೆಯದ ಬಿಬಿಎಂಪಿ ಚುನಾವಣೆ: ಕೌನ್ಸಿಲರ್ ಗಳಿಲ್ಲದೆ ಮಳೆಗಾಲದಲ್ಲಿ ಸಮಸ್ಯೆ ನಿರ್ವಹಿಸುವುದೇ ದುಸ್ತರ!

ಕಳೆದ 10 ವರ್ಷಗಳ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ವಿವಿಧ ಅನುದಾನಗಳ ಮೂಲಕ 46,300 ಕೋಟಿ ರೂ. ಬಿಡುಗಡೆಯಾಗಿದೆ. ಈ ಬೃಹತ್‌ ಪ್ರಮಾಣದ ಹಣ ಎಲ್ಲಿಗೆ ಹೋಯಿತು? ಯಾರಿಗೆ ತಲುಪಿದೆ? ಎಂಬುದರ ಕುರಿತು ತನಿಖೆಯಾಗಬೇಕು. ನ್ಯಾಯ ಸಮ್ಮತ ತನಿಖೆಯಾಗಬೇಕಾದರೆ ಪ್ರಕರಣವನ್ನು ನ್ಯಾಯಾಂಗದ ತನಿಖೆ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ನಡುವೆ ಬಿಬಿಎಂಪಿ ಕೇಂದ್ರ ಕಚೇರಿಯ ಬಳಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದಾಗೇ ಎನ್‌.ಆರ್‌.ರಮೇಶ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ ಪ್ರಸಂಗ ನಡೆಯಿತು.

ಸುದ್ದಿಗೋಷ್ಠಿ ವೇಳೆ ಸ್ಥಳಕ್ಕೆ ಬಂದ ಹಲಸೂರು ಗೇಟ್‌ ಪೊಲೀಸರು ದಿಢೀರ್‌ ಆಗಿ ರಮೇಶ್‌ ಅವರನ್ನು ಕರೆದೊಯ್ದರು. ಪೊಲೀಸ್‌ ವಾಹನದಲ್ಲಿ ಕರೆದೊಯ್ದು ಫ್ರೀಡಂ ಪಾರ್ಕ್‌ ಬಳಿ ಬಿಟ್ಟು ತೆರಳಿದ್ದಾರೆಂದು ತಿಳಿದುಬಂದಿದೆ.

ಪೊಲೀಸರು ತಮ್ಮನ್ನು ವಶಕ್ಕೆ ಪಡೆದ ಕುರಿತು ಪ್ರತಿಕ್ರಿಯೆ ನೀಡಿರುವ ರಮೇಶ್ ಅವರು, ಆರೋಪ ಕುರಿತು ಐಎಎಸ್ ಅಧಿಕಾರಿಗಳಿಗೆ, ತಮ್ಮ ಪತಿ ರಜನೀಶ್ ಗೋಯೆಲ್ ಅವರ ಹೆಸರನ್ನೂ ಉಲ್ಲೇಖಿಸಿದ್ದಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರ ಹೆಸರನ್ನು ಹೇಳಿದ್ದಕ್ಕೆ ಎಲ್ಲರಿಗೂ ನೋವಾಗಿರಬೇಕು. ಹೀಗಾಗಿ ಪತ್ರಿಕಾಗೋಷ್ಠಿ ನಡೆಸದಂತೆ ಒತ್ತಡ ಹೇರಿರಬಹುದು. ಬಂಧನಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಆಯುಕ್ತರಿಂದ ವಿವರಣೆ ಕೇಳಲಾಗಿದ್ದು,. ಉತ್ತರಕ್ಕಾಗಿ ಕಾಯುತ್ತಿದ್ದೇನೆ. ಈ ಬಗ್ಗೆ ಕಾನೂನು ರೀತಿ ಹೋರಾಟ ನಡೆಸುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com