ಮಂಗಳೂರು: ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ನಿಧನರಾದ ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಗಳನ್ನು ಐದು ನಿರ್ಗತಿಕ ರೋಗಿಗಳಿಗೆ ಬುಧವಾರ ದಾನ ಮಾಡಲಾಯಿತು.
ಗ್ಲೋರಿಯಾ ರೊಡ್ರಿಗಸ್ (23 ವರ್ಷ) ಅವರ ಅಂಗಗಳನ್ನು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೆ ಕಸಿ ಮಾಡಲಾಗಿದ್ದು, ಎರಡು ವಿಶೇಷ ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಅಂಗಾಂಗ ಕಸಿ ಮಾಡಿದ್ದಾರೆ ಎನ್ನಲಾಗಿದೆ.
ರೋಡ್ರಿಗಸ್ ಅವರ ಯಕೃತ್ತನ್ನು ಎಜೆ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮೂತ್ರಪಿಂಡವನ್ನು ಕೆಎಂಸಿ ಮಣಿಪಾಲಕ್ಕೆ ಮತ್ತು ಚರ್ಮ ಮತ್ತು ಕಾರ್ನಿಯಾವನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
'ಈ ಮಹತ್ವದ ಘಟನೆಯು ಅಂಗಾಂಗ ದಾನದ ಪರಿವರ್ತಕ ಪರಿಣಾಮವನ್ನು ಎತ್ತಿ ತೋರಿಸುತ್ತದೆ, ಭರವಸೆ ಮತ್ತು ಸಹಾನುಭೂತಿಯ ಆಳವಾದ ಸಂದೇಶವನ್ನು ನೀಡುತ್ತದೆ' ಎಂದು FMMCH ಹೇಳಿಕೆಯಲ್ಲಿ ತಿಳಿಸಿದೆ.
ರೋಡ್ರಿಗಸ್ ಸಾವಿಗೆ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಕಾರಣ
ಮೂಲಗಳ ಪ್ರಕಾರ ಕೇವಲ 23 ವರ್ಷ ವಯಸ್ಸಿನ ಗ್ಲೋರಿಯಾ ರೊಡ್ರಿಗಸ್ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಕಾರಣ ಎನ್ನಲಾಗಿದೆ. ಸೇಂಟ್ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ಅಧ್ಯಾಪಕರಾಗಿದ್ದ ರೋಡ್ರಿಗಸ್ ಅವರು ಕೆಲವು ದಿನಗಳ ಹಿಂದೆ ಊಟ ಮಾಡಿದ ಕೂಡಲೇ ಅವರ ದೇಹದ ಮೇಲೆ ಅಲರ್ಜಿಯ ಪ್ರತಿಕ್ರಿಯೆ ಕಾಣಲಾರಂಭಿಸಿತು. ದೇಹದ ಚರ್ಮದ ಮೇಲೆ ದದ್ದುಗಳು ಏಳಲಾರಂಭಿಸಿತು. ಇದು ತೀವ್ರವಾದ ಮೆದುಳಿನ ಕಾಂಡದ ಅಸಾಧಾರಣ ಕ್ರಿಯೆಗೆ ಕಾರಣವಾಯಿತು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರ ಎರಡು ತಂಡಗಳು ಆಕೆಯನ್ನು 2 ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪರಿಣಾಮ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ದೃಢಪಡಿಸಿದರು. ಆ ಬಳಿಕವೇ ಕುಟುಂಬಸ್ಥರು ಆಕೆಯ ಅಂಗಾಂಗ ದಾನಕ್ಕೆ ಮುಂದಾದರು ಎಂದು ಹೇಳಲಾಗಿದೆ. ಬುಧವಾರ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ವೇಳೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆಕೆಯ ಕುಟುಂಬ ಮತ್ತು ಸ್ನೇಹಿತರು ಹಾಜರಿದ್ದರು. ಆಕೆಯ ಅಕಾಲಿಕ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಅಂದಹಾಗೆ ಅನಾಫಿಲ್ಯಾಕ್ಸಿಸ್ ಒಂದು ತೀವ್ರವಾದ, ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆಯಾಗಿದ್ದು ಅದು ಬಹು ಅಂಗಗಳ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು.
Advertisement