ಬೆಂಗಳೂರು: ಮಹದೇವಪುರ ವಲಯದ ಕೆರೆ, ರಾಜಕಾಲುವೆ, ಚರಂಡಿಗಳ ಒತ್ತುವರಿ ಗುರುತಿಸಿ, ಶೀಘ್ರಗತಿಯಲ್ಲಿ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಸೂಚನೆ ನೀಡಿದರು.
‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಡಿ ಮಹದೇವಪುರ ವಲಯದ ವಿವಿಧೆಡೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೆರೆ ಒತ್ತುವರಿ ಜಾಗ ಗುರುತಿಸಿ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಆರ್ ಪುರದ ವೆಂಗಯ್ಯ ಕೆರೆಯಲ್ಲಿ 8 ಕೋಟಿ ರೂ.ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ನಡೆದಿದೆ. ಅಲ್ಲದೆ, ಬೇಲಿ ಅಳವಡಿಕೆ, ಒಳದಾರಿಗಳನ್ನು ಸರಿಪಡಿಸುವುದು, ಡೈವರ್ಶನ್ ಲೈನ್‌ಗಳು ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೊಳಚೆ ನೀರು ಕೆರೆಗೆ ಹರಿದು ಹೋಗುವುದನ್ನು ತಡೆಯಲು ಪಾಲಿಕೆ ವತಿಯಿಂದ 15 ಎಂಎಲ್ ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ. ಜಲಮಂಡಳಿಯಿಂದ ಈಗಾಗಲೇ 10 ಎಂಎಲ್‌ಡಿ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಆಯುಕ್ತರಿಗೆ ಮಾಹಿತಿ ನೀಡಿದರು.
ಇದೇ ವೇಳೆ ಮಳೆಗಾಲದಲ್ಲಿ ಸಕ್ರಾ ಆಸ್ಪತ್ರೆ ರಸ್ತೆಯಲ್ಲಿ ನೀರು ನಿಲ್ಲುತ್ತಿರುವುದನ್ನು ತಿಳಿಸಿದ ಅವರು, ಪ್ರವಾಹ ತಡೆಗಟ್ಟಲು 750 ಮೀಟರ್ ಉದ್ದದ ರಸ್ತೆಯಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅದರಂತೆ ಈ ರಸ್ತೆಯಲ್ಲಿ ಹಾದು ಹೋಗುವ ರಾಜಕಾಲುವೆಯ ಎರಡೂ ಬದಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಉಳಿದ ಜಾಗದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಾಹಿತಿ ಪಡೆದ ಆಯುಕ್ತರು, ಸಕ್ರಾ ಆಸ್ಪತ್ರೆಯಿಂದ ಇಕೋ ಸ್ಪೇಸ್ ವರೆಗಿನ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಸುಸ್ತಿದಾರರ ಪ್ರಕರಣಗಳಲ್ಲಿ ಆಸ್ತಿ ತೆರಿಗೆ ವಸೂಲಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಲಯ ಆಯುಕ್ತರಿಗೆ ಸೂಚನೆ ನೀಡಿದರು.
Advertisement