ಮಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಜನರನ್ನು ಬಲೆಗೆ ಬೀಳಿಸಿಕೊಂಡು, ಅವರಿಂಗ ಹಣ ಲಪಟಾಯಿಸಲು ವಂಚರು ನಿರಂತರವಾಗಿ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೆಲವು ದಿನಗಳಿಂದ ಯೂಟ್ಯೂಬ್ ಮತ್ತು ವಾಟ್ಸಾಪ್ ಮೂಲಕ ಹೊಸ ವಂಚನೆ ನಡೆಯುತ್ತಿದೆ.
YouTube ವೀಡಿಯೊಗಳಿಗೆ ಲೈಕ್ ಕೊಟ್ಟರೆ, ಹಣ ನೀಡುತ್ತೇವೆಂದು ಹೇಳಿ ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ದಕ್ಷಿಣ ಕನ್ನಡದ ವ್ಯಕ್ತಿಯೊಬ್ಬರು ಈ ವಂಚಕರ ಬಲೆಗೆ ಬಿದ್ದಿದ್ದು, ಲಕ್ಷಾಂತರ ರುಪಾಯಿ ಹಣ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರುದಾರರು ಇನ್‌ಸ್ಟಾಗ್ರಾಂನಲ್ಲಿ ಆನ್‌ಲೈನ್ ಅರ್ನಿಂಗ್ ಲಿಂಕ್ ಕ್ಲಿಕ್ ಮಾಡಿದ್ದು, ಈ ವೇಳೆ 9733674701 ನಂಬರಿನ ವಾಟ್ಸ್ ಅಪ್ ಚಾಟ್ ತೆರೆದಿದೆ. ಅದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಾನು ಕಳಿಸಿದ ವೀಡಿಯೋಕ್ಕೆ ಲೈಕ್ ಮಾಡಿದರೆ 123 ರಿಂದ 5,000 ರೂ. ವರೆಗೆ ಗಳಿಸಬಹುದು ಎಂದು ತಿಳಿಸಿದ್ದಾನೆಯ ಇದನ್ನು ನಂಬಿದ ದೂರುದಾರರು ವೀಡಿಯೊಗಳಿಗೆ ಲೈಕ್ ಕೊಟ್ಟಿದ್ದರು.
ಬಳಿಕ ಆರೋಪಿಯು ಟೆಲಿಗ್ರಾಮ್ ಅಪ್ಲಿಕೇಶನ್ ಲಿಂಕ್ ಕಳಿಸಿ, ಲೈಕ್ ಮಾಡಿದ್ದಕ್ಕೆ 123 ರೂ.ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿದ್ದ. ಬಳಿಕ ಆರೋಪಿಗಳು ದೂರುದಾರರೊಂದಿಗೆ ಮತ್ತೆ ಚಾಟ್ ಮಾಡಿ ಇದೇ ರೀತಿ ಹೆಚ್ಚು ಗಣ ಗಳಿಸಬಹುದು ಎಂದು ನಂಬಿಸಿ ದೂರುದಾರರನ್ನು ಡಿ929ಗ್ಲೋಬಲ್ ಹೈ ಸ್ಯಾಲರಿ ಗ್ರೂಪ್ ಎಂಬ ಟೆಲಿಗ್ರಾಮ್ ಗ್ರೂಪಿಗೆ ಸೇರಿಸಿ ಲಿಂಕ್‌ವೊಂದನ್ನು ಕಳಿಸಿದ್ದ.
ಆರೋಪಿಗಳು ಅನಿಲ್ ಸಿಂಗ್, ತ್ರಿಶಾ ವರ್ಮ ಎಂಬ ಯೂಸರ್ ನೇಂನಿಂದ ಚಾಟ್ ಮಾಡಿ, 5000 ರೂ. ಜಮೆ ಮಾಡುವಂತೆ ತಿಳಿಸಿದ್ದರು. ದೂರುದಾರರು 5,000 ರೂ. ಜಮೆ ಮಾಡಿ, ಅವರು ಹೇಳಿದ ಟಾಸ್ಕ್ ಪೂರ್ಣಗೊಳಿಸಿ, ಹಣ ತೆಗೆಯಲು ಹೋಗಿದ್ದರು. ಆಗ ವಂಚಕರು ನೀವು ತಪ್ಪು ಮಾಡಿದ್ದೀರಾ, 5000 ರೂ. ಬೇಕಾದರೆ 50 ಸಾವಿರ ಇರಿಸುವಂತೆ ಕೇಳಿದ್ದರು. ಇದೇ ರೀತಿ ತಪ್ಪಿರುವುದಾಗಿ ಹೇಳಿ ನಂಬಿಸಿ ಹಣ ಪಡೆಯುತ್ತಾ ಹೋಗಿದ್ದಾರೆ. ಇದರಂತೆ ದೂರುದಾರರು ಒಟ್ಟು 5,09,000 ರೂ. ಮೊತ್ತವನ್ನು ವಿವಿಧ ಖಾತೆಗಳಿದೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಹಣವನ್ನು ಮರಳಿಸದೆ ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ಮಂಗಳೂರಿನ ಸೈಬರ್ ಕಾನೂನು ಮತ್ತು ಭದ್ರತಾ ತಜ್ಞ ಡಾ.ಅನಂತ್ ಪ್ರಭು ಜಿ ಅವರು, ಯೂಟ್ಯೂಬ್ ವೀಡಿಯೊಗಳಿಗೆ ಲೈಕ್ ಮತ್ತು ಶೇರ್ ಮಾಡಿದರೆ ಹಣ ನೀಡುವುದಾಗಿ ಹಲವರು ಪ್ರಚಾರ ಮಾಡುತ್ತಿದ್ದು, ಹಣ ನೀಡುತ್ತೇವೆಂದು ವಂಚಿಸುತ್ತಿದ್ದಾರೆ. ಈ ವಂಚನೆಗೆ ಹಲವರು ಬಲಿಯಾಗಿದ್ದಾರೆ. ದಿನಕ್ಕೆ 100 ವಿಡಿಯೋಗಳನ್ನು ಶೇರ್ ಮಾಡಿ, ಲೈಕ್ ಕೊಡುವಂತೆ ವಂಚಕರು ಟಾಸ್ಕ್ ನೀಡುತ್ತಾರೆ. ಬಲೆಗೆ ಬಿದ್ದವರನ್ನು ಪಸಲಾಯಿಸಿ, ಸೇವೆಗಳ ನೆಪವೊಡ್ಡಿ ಹಣ ಕೀಳುತ್ತಿದ್ದಾರೆ. ಬಳಿಕ ನಾಪತ್ತೆಯಾಗುತ್ತಾರೆ.
ಇದಲ್ಲದೆ, ಜನರ ನಂಬಿಸಲು ಚಲನಚಿತ್ರ ತಾರೆಯರು, ಉದ್ಯಮಿಗಳ ಫೋಟೋಗಳನ್ನು ಬಳಸುತ್ತಾರೆ. ಆದರೆ, ಈ ಬಗ್ಗೆ ಆ ವ್ಯಕ್ತಿಗಳಿಗೆ ಮಾಹಿತಿಗಳೇ ಇರುವುದಿಲ್ಲ ಎಂದು ವಿವರಿಸಿದ್ದಾರೆ.
Advertisement