
ಬೆಂಗಳೂರು: ಬಾಡಿಗೆದಾರರ ಸೋಗಿನಲ್ಲಿ ಬಂದು ಹಿರಿಯ ನಾಗರೀಕರ ಹತ್ಯೆ ಮಾಡಿ, ದರೋಡೆ ಮಾಡುತ್ತಿರುವ ಆರೋಪಿಗಳ ಪತ್ತೆಗೆ ರಾಮನಗರ ಜಿಲ್ಲಾ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ಮಹಿಳೆ ಹಾಗೂ ಪುರುಷರಿಬ್ಬರು ಹಿರಿಯ ನಾಗರೀಕರ ದರೋಡೆ ಮಾಡುತ್ತಿದ್ದು, ಇಬ್ಬರ ಪತ್ತೆಗೆ ರಾಮನಗರ ಜಿಲ್ಲೆಯ ತಾವರಕೆರೆ ಪೊಲೀಸರು ವಾಂಟೆಡ್ ನೋಟಿಸ್ ಜಾರಿ ಮಾಡಿದ್ದಾರೆ.
ಟು-ಲೆಟ್ ಬೋರ್ಡ್ ಇರುವ ಮನೆಗಳನ್ನು ನೋಡುವ ಇಬ್ಬರೂ ಆರೋಪಿಗಳು ಬಾಡಿಗೆದಾರರ ಸೋಗಿನಲ್ಲಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಾರೆ. ಮಾಲೀಕರು ಹಿರಿಯ ನಾಗರೀಕರು ಎಂಬುದು ತಿಳಿದುಬಂದರೆ, ದರೋಡೆಗೆ ಸಂಚು ರೂಪಿಸುತ್ತಾರೆ. ದರೋಡೆ ಬಳಿಕ ಮಾಲೀಕರನ್ನು ಮನೆಯಲ್ಲಿ ಕಟ್ಟಿ ಹಾಕಿ, ಬೀಗ ಹಾಕಿ ಪರಾರಿಯಾಗುತ್ತಿದ್ದಾರೆ. ವೃದ್ದೆಯೊಬ್ಬಳ ಕೊಲೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ನಿಖರ ಮಾಹಿತಿ ಸದ್ಯ ಪೊಲೀಸರಿಗೆ ಲಭ್ಯವಾಗಿಲ್ಲ.
ಆಗಸ್ಟ್ 6 ರಂದು ತಾವರೆಕೆರೆ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಗಳು ವಯೋವೃದ್ಧ ದಂಪತಿಯೊಂದಿಗೆ ಮಾತನಾಡುವಾಗ ತಮ್ಮನ್ನು ಆಶಾ ಮತ್ತು ಜೀವನ್ ಎಂದು ಪರಿಚಯಿಸಿಕೊಂಡಿದ್ದಾರೆ. ಇಬ್ಬರೂ ದಂಪತಿಗಳೆಂದು ಹೇಳಿಕೊಂಡಿದ್ದಾರೆ.
ಬಳಿಕ ಸಿದ್ದಗಂಗಪ್ಪ ಮತ್ತು ಅವರ ಪತ್ನಿ ಸಿದ್ದಲಿಂಗಮ್ಮ ಅವರ ಮನೆಯಲ್ಲಿ ದರೋಡೆ ಮಾಡಲು ಹೋಗಿದ್ದು, ಇಬ್ಬರ ಮೇಲೆ ಮೆಣಸಿನ ಪುಡಿ ಎರಚಿ ಹಲ್ಲೆ ನಡೆಸಿ, ಸುಮಾರು 2.25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇಬ್ಬರೂ ಆಗಾಗ್ಗೆ ತಾವಿದ್ದ ಸ್ಥಳಗಳನ್ನು ಬದಲಿಸುತ್ತಿದ್ದು, ಇಬ್ಬರೂ ದಂಪತಿಗಳು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement