
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳಲ್ಲಿ ಮಳೆ ನೀರು ಸಂಗ್ರಹಿಸಲು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು 634 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಹೇಳಿದ್ದಾರೆ.
ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 1,280 ಉದ್ಯಾನಗಳಿವೆ. ಸ್ಥಳಾವಕಾಶ ಆಧರಿಸಿ ಹಂತ ಹಂತವಾಗಿ ಇಂಗು ಗುಂಡಿಗಳನ್ನು ತೋಟಗಾರಿಕೆ ವಿಭಾಗದಿಂದ ನಿರ್ಮಿಸಲಾಗುತ್ತದೆ. 12 ಅಡಿ ಆಳ ಹಾಗೂ 5 ಅಡಿ ಅಗಲ ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಲಿದ್ದು, ನಾಲ್ಕು ಸಾವಿರ ಲೀಟರ್ ಮಳೆ ನೀರನ್ನು ಸಂಗ್ರಹವಾಗುವಂತೆ ಮಾಡಲಾಗಿದೆ ಎಂದು ಹೇಳಿದರು.
ಮಳೆ ನೀರು ಸಂಗ್ರಹಿಸಿ, ಇಂಗಿಸುವ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು 2025ರ ಮಾರ್ಚ್ ಅಂತ್ಯಕ್ಕೆ ಒಟ್ಟು ಒಂದು ಸಾವಿರ ಇಂಗು ಗುಂಡಿಗಳನ್ನು ನಿರ್ಮಿಸುವ ಗುರಿ ಇದೆ. ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ನೀರು ಹರಿದು ಹೋಗುವ ಗುಂಡಿಯ ದ್ವಾರಕ್ಕೆ ಕಬ್ಬಿಣದ ಪರದೆ ಅಳವಡಿಸಲಾಗಿದೆ.
ಈ ಮೂಲಕ ನೀರಿನಲ್ಲಿ ಕಸ-ಕಡ್ಡಿ ಗುಂಡಿಗೆ ಸೇರುವುದನ್ನು ತಡೆದು, ಶೇ 80 ರಷ್ಟು ಪ್ರಮಾಣದ ನೀರು ಇಂಗುಗುಂಡಿಗೆ ಸೇರುವಂತೆ ಮಾಡಲಾಗಿದೆ. ಈ ಇಂಗು ಗುಂಡಿಗಳು 4000 ಲೀಟರ್ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಉದ್ಯಾನವನಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದರು.
Advertisement