ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಆರ್ಭಟ ಮುಂದುವರೆದಿದ್ದು, ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡಿನ ಸಾಯಿಬಾಬಾ ಲೇಔಟ್ ಮತ್ತೆ ಜಲಾವೃತಗೊಂಡಿದೆ.
ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಲೇಔಟ್ ನಲ್ಲಿ ಮೊನ್ನೆಯಷ್ಟೇ ಫೈರ್ ಇಂಜಿನ್ ಮೂಲಕ ನೀರನ್ನು ಹೊರ ಹಾಕಲಾಗಿತ್ತು. ಈಗ ಲೇಔಟ್ ಮತ್ತೆ ಜಲಾವೃತಗೊಂಡಿದ್ದು, ಜನ ಹೈರಾಣಾಗಿದ್ದಾರೆ.
ಪ್ರೆಸ್ಟೀಜ್ ಶಾಲೆಯ ಶಿಕ್ಷಕಿ ನೀಲುಫುರ್ ಅಹಮದ್ ಅವರು ಮಾತನಾಡಿ, ಭಾರೀ ಮಳೆಯ ಪರಿಣಾಮ ನೀರು ತುಂಬಿಕೊಂಡು ಸಂಪ್ ಮೋಟಾರ್ ಹಾಳಾಗಿತ್ತು. ಎಲೆಕ್ಟ್ರಿಕಲ್ ಕೆಲಸಕ್ಕೆ ರೂ.10,000 ಖರ್ಟು ಮಾಡಿದ್ದೆ. ಇದೀಗ ಮತ್ತೆ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿ ಮೂರು ಇಂಚುಗಳಷ್ಟು ನೀರಿದೆ. ಹಾಸಿಗೆ, ಸೋಫಾ ಎಲ್ಲವೂ ಹಾಳಾಗಿದೆ. ಬಡಾವಣೆಯಲ್ಲಿ ಕಳೆದ 10 ವರ್ಷಗಳಿಂದ ಇದೇ ರೀತಿಯ ಸಮಸ್ಯೆ ಕಾಡುತ್ತಿದೆ. ಶಾಸಕ ಬೈರತಿ ಬಸವರಾಜ್ ಆಗಲಿ, ಬಿಬಿಎಂಪಿ ಅಧಿಕಾರಿಗಳಾಗಲಿ ನಮ್ಮ ಕಷ್ಟದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸ್ಥಳೀಯ ನಿವಾಸಿಗಳು ನ್ಯಾಯಾಲಯ ಪ್ರವೇಶಿಸಿ, ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲಿ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಇದ್ದಾರೆ. ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ನೀರಿನಿಂದ ಹರಡುವ ಸೋಂಕು, ಸೊಳ್ಳೆಗಳಿಂದ ಹರಡುವ ರೋಗಗಳು ಹೆಚ್ಚಾಗಿ ಅನೇಕರು ಬಲಿಯಾಗುತ್ತಾರೆ ಎಂದು ಬಡಾವಣೆಯ ಹಿರಿಯ ನಾಗರಿಕರೊಬ್ಬರು ಹೇಳಿದ್ದಾರೆ.
ಈ ಮಧ್ಯೆ, ಬಿಡಿಎಯಿಂದ ಯಾವುದೇ ಅನುಮತಿಯಿಲ್ಲದೆ ಅಕ್ರಮವಾಗಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಲೇಔಟ್‌ನಲ್ಲಿ ರೈಲ್ವೆ ಸೇತುವೆಯ ಕೆಳಗೆ ಅಭಿವೃದ್ಧಿ ಕಾಮಗಾರಿಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಪ್ರಸ್ತುತ, ಮಳೆ ನೀರು ಚರಂಡಿಯು ಕೇವಲ 20 ಅಡಿ ಅಗಲದ ಪ್ರದೇಶವನ್ನು ಹೊಂದಿದ್ದು, ಮಳೆಯ ಸಮಯದಲ್ಲಿ ಹೆಬ್ಬಾಳ-ನಾಗವಾರ ಮೇಲ್ಭಾಗದಿಂದ ನೀರು ಹರಿದು ಬಂದಾಗ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement