

ಬೆಂಗಳೂರು: ಭಾಷಾಂತರ ನಿರ್ದೇಶನಾಲಯವು (DoT) ಭಾಷಾಂತರಕಾರರ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ವಿಶೇಷವಾಗಿ ಇಂಗ್ಲಿಷ್‌ನಿಂದ ಕನ್ನಡ ಮತ್ತು ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವವರ ಸಂಖ್ಯೆ ಕಡಿಮೆಯಿದೆ. ಹಿಂದಿ ಭಾಷಾಂತರಕಾರರ ಹುದ್ದೆ ಕಳೆದ 15 ವರ್ಷಗಳಿಂದ ಖಾಲಿ ಇದೆ.
ಮಂಜೂರಾದ 40 ಸಿಬ್ಬಂದಿಗಳ ಪೈಕಿ 19 ಸಿಬ್ಬಂದಿಯನ್ನು ಮಾತ್ರ ನಿರ್ದೇಶನಾಲಯ ಹೊಂದಿದೆ. ಕೆಪಿಎಸ್ ಸಿ ಮೂಲಕ 9 ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ ನೇಮಕಾತಿ ಯಾವಾಗ ನಡೆಯುತ್ತದೆ ಎಂಬುದು ಖಚಿತವಾಗಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಭಾಷಾಂತರಕಾರರ ಕೊರತೆಯಿಂದಾಗಿ, ಕೇಂದ್ರ- ರಾಜ್ಯ ಸರ್ಕಾರಗಳ ನಡುವೆ ಮತ್ತು ರಾಜ್ಯ ಸರ್ಕಾರ- ನ್ಯಾಯಾಲಯಗಳ ನಡುವಿನ ಸಂವಹನದ ಮೇಲೆ ಪರಿಣಾಮ ಬೀರಿದ್ದು, ನಿಯಮಿತ ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗಿದೆ.
ಇಂಗ್ಲಿಷ್ ಮತ್ತು ಹಿಂದಿ ಭಾಷಾಂತರಕಾರರ ಅವಶ್ಯಕತೆ ಇದೆ. ಆದರೆ ನಮ್ಮಲ್ಲಿ ಒಂದಿಲ್ಲ. ಭಾಷಾಂತರ ಕಾರ್ಯವನ್ನು ಹೊರಗುತ್ತಿಗೆ ನೀಡುತ್ತಿದ್ದು, ದೋಷಗಳು ಅಥವಾ ಮಾಹಿತಿ ಸೋರಿಕೆಯಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವೆಲ್ಲ ಸರ್ಕಾರಿ ಕೆಲಸಗಳು. ಹಲವು ಮನವಿಗಳನ್ನು ಸಲ್ಲಿಸಿದ್ದೇವೆ. ಆದರೆ ಸರಕಾರ ಇನ್ನೂ ಭಾಷಾಂತರಕಾರರನ್ನು ನೇಮಿಸಿಲ್ಲ. ನಮಗೆ ಪರಿಣತರ ಅಗತ್ಯವಿದೆ ಎಂದು ಇಲಾಖೆಯ ನಿರ್ದೇಶಕ ಎಂ ವೆಂಕಟೇಶ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಯಾವುದೇ ಹೊಸ ನೇಮಕಾತಿ ನಡೆದಿಲ್ಲ: ಮೊದಲು ಮರಾಠಿ ಮತ್ತು ಉರ್ದು ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಭಾಷಾಂತರ ನಿರ್ವಹಿಸುವ ಅನುವಾದಕರು ಇದ್ದರು. ಆದರೆ ಅವರ ನಿವೃತ್ತಿಯ ನಂತರ ಯಾವುದೇ ಹೊಸ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಫೈಲುಗಳ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದರು.
ಸಿಬ್ಬಂದಿ ಕೊರತೆಯಿಂದ ಕಂದಾಯ, ಕೃಷಿ ಮತ್ತು ಪೊಲೀಸ್ ಇಲಾಖೆಗಳ ಮೇಲೆ ಪರಿಣಾಮ ಬೀರಿದೆ. ಇಲ್ಲಿ ನಾಗರಿಕರು ಮತ್ತು ಸರ್ಕಾರದೊಂದಿಗೆ ಸಂವಹನ ತ್ವರಿತ ಗತಿಯಾಗಿರುತ್ತದೆ. 2018 ರಲ್ಲಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿ, 23 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಸದಸ್ಯರು ದಾಖಲೆಗಳನ್ನು ಅನುವಾದಿಸುತ್ತಾರೆ. ಆದರೆ ಸದಸ್ಯರು ಹೊರಗುತ್ತಿಗೆಯವರಾಗಿದ್ದು, ಅಗತ್ಯವಿದ್ದಾಗ ಮಾತ್ರ ನೆರವು ನೀಡುತ್ತಾರೆ. ಹೀಗಾಗಿ, ಸಕಾಲಿಕ ಕೆಲಸ ಮತ್ತು ಅಗತ್ಯವಿದ್ದಾಗ ಅವುಗಳ ಲಭ್ಯತೆ ಖಾತರಿಯಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.