ಬೆಂಗಳೂರು: ಕಾಂಗ್ರೆಸ್ ಮುಖಂಡ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ, ಹಣ ವಸೂಲಿಗೆ ಯತ್ನಿಸಿದ ಕಲಬುರಗಿ ಜಿಲ್ಲೆಯ ಮಹಮೊಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಅವರನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದ ಮಂಜುಳಾ, ಜಿಲ್ಲೆಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಾಗಿದ್ದಳು. ಪಕ್ಷದಲ್ಲಿದ್ದ ಕಾರಣ ಮಾಲೀಕಯ್ಯಗೆ ಆಕೆಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಸಲುಗೆಯಲ್ಲಿ ಮಾತನಾಡುತ್ತಿದ್ದರು. ಈ ನಡುವೆ ವಿಡಿಯೋ ಕಾಲ್‌ಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆಕೆ, ಬಳಿಕ ಇವುಗಳನ್ನು ಮುಂದಿಟ್ಟು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಳು. ಅಕ್ಟೋಬರ್ 23 ಮತ್ತು 24 ರಂದು ವಾಟ್ಸಾಪ್ ಮೂಲಕ ಪದೇ ಪದೇ ಮಾಲೀಕಯ್ಯ ಅವರನ್ನು ಸಂಪರ್ಕಿಸಿ, ರೂ.20 ಲಕ್ಷ ಹಣ ನೀಡದಿದ್ದರೆ, ವಿಡಿಯೋ, ಆಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.
ಅಲ್ಲದೆ, 2 ದಿನ ಹಿಂದೆ ಬೆಂಗಳೂರಿನಲ್ಲಿ ನೆಲೆಸಿರುವ ಮಾಲೀಕಯ್ಯ ಪುತ್ರ ರಿತೀಶ್ ಭೇಟಿಯಾಗಿ ಡೀಲ್ ನಡೆಸಲು ಮಂಜುಳಾ ದಂಪತಿ ಮುಂದಾಗಿದ್ದರು. ಗರುಡಾ ಮಾಲ್ ಬಳಿ ಬಂದು ಹಣ ನೀಡುವಂತೆ ಸೂಚಿಸಿದ್ದಳು. ಈ ಸಂಬಂಧ ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಗುತ್ತೇದಾರ್ ಅವರು ಶುಕ್ರವಾರ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಶನಿವಾರವೇ ಬೆಂಗಳೂರಿನ ಗರುಡಾ ಮಾಲ್ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು 8 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಹೆಚ್ಚಿನ ಮಾಹಿತಿ ಕಲೆಹಾಕಲು ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement