
ಬೆಂಗಳೂರು: ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡುಗಳ ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಸರ್ಕಾರ ಮತ್ತೊಂದು ಗಡುವು ನೀಡಿರುವದಕ್ಕೆ ನಗರವಾಸಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮೇ ಅಂತ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ವೇಳೆ ವಿಶೇಷ ಕಾರ್ಯಪಡೆ ರಚಿಸುವುದಾಗಿ ಹಾಗೂ 30 ದಿನಗಳಲ್ಲಿ ಗುಂಡಿಗಳನ್ನು ತುಂಬಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದ್ದರು.
ಆದರೆ, ನಿರಂತರ ಮಳೆಯಿಂದಾಗಿ ಗುಂಡಿಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಹೇಳಿದ್ದು, ಆಗಸ್ಟ್ 19 ರವರೆಗೆ ನಗರದಲ್ಲಿ 2,303 ಗುಂಡಿಗಳಷ್ಟೇ ಮುಚ್ಚಿರುವುದು ವರದಿಗಳಿಂದ ತಿಳಿದುಬಂದಿದೆ.
ನಗರದ ಹಲವು ರಸ್ತೆಗಳು ಗುಂಡಿಗಳಿಂದ ಕೂಡಿದೆ. ರಸ್ತೆಯಲ್ಲಿ ಹೋಗುವಾಗ ಜಾಗರೂಕರಾಗಿರದಿದ್ದರೆ, ಬಿದ್ದು ಗಾಯಗೊಳ್ಳುತ್ತೇವೆ. ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ವಾಹನ ಚಾಲಕ ವಿನಯ್ ಕುಮಾರ್ ಎಂಬುವವರು ಹೇಳಿದ್ದಾರೆ.
ಹಗಲಿನಲ್ಲಿ ಎಚ್ಚರಿಕೆಯಿಂದ ಸವಾರಿ ಮಾಡಬಹುದಾದರೂ, ರಾತ್ರಿಯಲ್ಲಿ ಗುಂಡಿಗಳ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಅವುಗಳನ್ನು ತಪ್ಪಿಸಲು ಸಾಧ್ಯವಾಗದೆ ಅಪಾಯಗಳು ಎದುರಾಗಬಹುದು ಎಂದು ತಿಳಿಸಿದ್ದಾರೆ.
ಟೆಕ್ಕಿ ಬಾಲಚಂದರ್ ಮಾತನಾಡಿ, ಬೆಂಗಳೂರು ಐಟಿ ರಾಜಧಾನಿಯಾಗಿದ್ದು, ಅಂತರರಾಷ್ಟ್ರೀಯ ಖ್ಯಾತಿಯನ್ನು ಹೊಂದಿದೆ. ಇಲ್ಲಿ ರಸ್ತೆಗಳ ನಿರ್ವಹಣೆ ಇಲ್ಲದಿದ್ದರೆ ಹೇಗೆ? ರಸ್ತೆಗಳನ್ನು ಗುಂಡಿಮುಕ್ತವಾಗಿ ನೋಡಿಕೊಳ್ಳುವುದು ರಾಕೆಟ್ ಸೈನ್ಸ್ ಅಲ್ಲ. ರಾಷ್ಟ್ರೀಯ ಹೆದ್ದಾರಿಗಳಂತೆ ಇಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಿಲ್ಲ. ರಸ್ತೆಗಳ ಸರಿಪಡಿಸಲು ಪದೇ ಪದೇ ಗಡುವುಗಳನ್ನು ನೀಡುತ್ತಲೇ ಇದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಸೂಚನೆ ನೀಡಿದ್ದರು.
ರಸ್ತೆ ಗುಂಡಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ತುರ್ತು ಗಮನ ಹರಿಸಬೇಕುಯ ಈಗಾಗಲೇ "ರಸ್ತೆ ಗುಂಡಿ ಗಮನ" ಎನ್ನುವ ಆ್ಯಪ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ. ಮಳೆಗಾಲದ ಕಾರಣಕ್ಕೂ ರಸ್ತೆ ಗುಂಡಿಗಳು ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಆದ್ಯ ಗಮನ ಹರಿಸಬೇಕು ಎಂದು ಹೇಳಿದ್ದರು
Advertisement