ಬೆಂಗಳೂರು: ಮೆಜೆಸ್ಟಿಕ್, ಗಾಂಧಿನಗರದಲ್ಲಿ ಟೋಯಿಂಗ್ ಪುನರಾರಂಭ; ಮೊದಲ ದಿನವೇ ದಂಡ ವಸೂಲಿ..!

ಟೋಯಿಂಗ್ ವಾಹನ ಸಿಬ್ಬಂದಿಯಿಂದ ವಾಹನ ಚಾಲಕರಿಗೆ ಕಿರುಕುಳ ನೀಡುತ್ತಿರುವ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 2022 ಫೆಬ್ರವರಿ ತಿಂಗಳಿನಲ್ಲಿ ವಾಹನಗಳ ಟೋಯಿಂಗ್'ಗೆ ನಿಷೇಧ ಹೇರಲಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಎರಡೂವರೆ ವರ್ಷಗಳ ಅಂತರದ ಬಳಿಕ ಬೆಂಗಳೂರಿನಲ್ಲಿ ವಾಹನಗಳ ಟೋಯಿಂಗ್‌ ಕಾರ್ಯವನ್ನು ಪುನರಾರಂಭಗೊಂಡಿದ್ದು, ಇನ್ನು ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ ಭರ್ಜರಿ ದಂಡ ಬೀಳಲಿದೆ.

ಆರಂಭಿಕವಾಗಿ ಮೆಜೆಸ್ಟಿಕ್‌ ಹಾಗೂ ಗಾಂಧಿನಗರ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ಸಮಸ್ಯೆಯ ಪರಿಹಾರಕ್ಕಾಗಿ ಆದ್ಯತೆ ಮೇರೆಗೆ ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಟೋಯಿಂಗ್‌ ಆರಂಭಿಸಲಾಗಿದೆ.

ಟೋಯಿಂಗ್ ವಾಹನ ಸಿಬ್ಬಂದಿಯಿಂದ ವಾಹನ ಚಾಲಕರಿಗೆ ಕಿರುಕುಳ ನೀಡುತ್ತಿರುವ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 2022 ಫೆಬ್ರವರಿ ತಿಂಗಳಿನಲ್ಲಿ ವಾಹನಗಳ ಟೋಯಿಂಗ್'ಗೆ ನಿಷೇಧ ಹೇರಲಾಗಿತ್ತು. ಇದಾದ ಬಳಿಕಗಾಂಧಿನಗರದ ಎಲ್ಲಾ ರಸ್ತೆಗಳನ್ನು 'ನೋ ಪಾರ್ಕಿಂಗ್' ಝೋನ್ ಎಂದು ಘೋಷಿಸಲಾಯಿತು. ಕಾಳಿದಾಸ ರಸ್ತೆ, ಗಾಂಧಿನಗರ ಮುಖ್ಯರಸ್ತೆ ಮತ್ತು ಇತರ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸಿದ್ದಾರೆ. ಅಲ್ಲದೆ, ಸ್ವಾತಂತ್ರ್ಯ ಉದ್ಯಾನದ ಬಳಿಯ ಬಹುಮಹಡಿ ಪಾರ್ಕಿಂಗ್‌ ಕಟ್ಟಡದಲ್ಲಿ ಪಾರ್ಕಿಂಗ್ ಸೌಲಭ್ಯ ಆರಂಭಿಸಲಾಗಿದೆ. ಆದರೆ, ಇದರ ಬಗ್ಗೆ ಜನರು ಆಸಕ್ತಿ ತೋರಿಸುತ್ತಿಲ್ಲ. ಬಹುಮಹಡಿ ಪಾರ್ಕಿಂಗ್‌ ಕಟ್ಟಡದಲ್ಲಿವಾಹನ ನಿಲುಗಡೆಗೆ ಸವಾರರು ಹಿಂದೇಟು ಹಾಕುತ್ತಿದ್ದಾರೆ.

ಮೆಜೆಸ್ಟಿಕ್‌ ಮತ್ತು ಗಾಂಧಿನಗರ ಸುತ್ತಮುತ್ತ ಹೋಟೆಲ್‌ಗಳು, ವಕೀಲರ ಕಚೇರಿಗಳು, ಬಟ್ಟೆ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶಾಪಿಂಗ್‌, ಆಹಾರ ಸೇವನೆಗೆ ಹಾಗೂ ಕಾನೂನು ಕೆಲಸಕ್ಕಾಗಿ ಈ ಭಾಗಕ್ಕೆ ಬರುವ ವಾಹನ ಸವಾರರು, ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳಲ್ಲಿ ವಾಹನ ನಿಲ್ಲಿಸುವ ಪ್ರವೃತ್ತಿ ಹೆಚ್ಚಾಗಿದೆ.

ಸಂಗ್ರಹ ಚಿತ್ರ
ಟ್ರಾಫಿಕ್ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಬಿಬಿಎಂಪಿ, ಸಾರಿಗೆ ಇಲಾಖೆ ಜೊತೆಗೂಡಿ ಕೆಲಸ: ಪರಮೇಶ್ವರ್

ಹೀಗಾಗಿ, ಮೆಜೆಸ್ಟಿಕ್‌ ಭಾಗದಲ್ಲಿ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಸಂಚಾರ ಪೊಲೀಸರು ನಿಲುಗಡೆ ನಿರ್ಬಂಧಿತ ಸ್ಥಳಗಳಲ್ಲಿ ವಾಹನಗಳ ಟೋಯಿಂಗ್‌ ಆರಂಭಿಸಿದ್ದಾರೆ. ಭಾನುವಾರ ಒಂದೇ ದಿನ ಸುಮಾರು 185 ವಾಹನಗಳನ್ನು ಟೋಯಿಂಗ್‌ ಮಾಡಿ ದಂಡ ವಿಧಿಸಿದ್ದಾರೆ.

ಎರಡು ಟೋಯಿಂಗ್ ವಾಹನಗಳು ಮತ್ತು ಟೋಯಿಂಗ್ ಕಾರ್ಯಾಚರಣೆಗೆ ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿಗಳನ್ನು ಒದಗಿಸಿದ್ದು, ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಮತ್ತು ಕಾನ್‌ಸ್ಟೆಬಲ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಪ್ಪಾದ ಪಾರ್ಕಿಂಗ್‌ಗೆ ಮಾತ್ರ ದಂಡವನ್ನು ಸಂಗ್ರಹಿಸಲಾಗುತ್ತಿದೆ. ವಾಹನಗಳನ್ನು ಟೋಯಿಂಗ್ ಮಾಡುವುದಕ್ಕೂ ಮುನ್ನ ಸ್ಪೀಕರ್ ನಲ್ಲಿ ವಾಹನದ ಸಂಖ್ಯೆಯನ್ನು ಘೋಷಿಸಲಾಗುತ್ತದೆ. ಈ ವೇಳೆ ಕರ್ತವ್ಯದಲ್ಲಿರುವ ಪೊಲೀಸರು ಬಾಡಿ ಕ್ಯಾಮೆರಾ ಧರಿಸಬೇಕಿದ್ದು, ಟೋಯಿಂಗ್ ಶುಲ್ಕ ಸಂಗ್ರಹಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಬಹು ಮಹಡಿ ಕಟ್ಟಡದ ಪಾರ್ಕಿಂಗ್ ಬಗ್ಗೆ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಲು ಈ ಉಪಕ್ರಮ ಆರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿಯ ಮನವಿಯನ್ನು ಅನುಸರಿಸಿ, ನಮ್ಮ ಇಲಾಖೆಯು ಟೋಯಿಂಗ್ ವಾಹನ ಸಿಬ್ಬಂದಿಗೆ ಸಹಕಾರ ನೀಡುತ್ತಿದೆ. ಟೋಯಿಂಗ್ ವಾಹನಗಳು ಮತ್ತು ಸಿಬ್ಬಂದಿಯ ವೆಚ್ಚವನ್ನು ಪಾಲಿಕೆ ಭರಿಸುತ್ತದೆ. ಪೊಲೀಸ್ ಠಾಣೆ ವ್ಯಾಪ್ತಿಯ 28 ರಸ್ತೆಗಳಲ್ಲಿ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ. ಹೊಸ ಟೋಯಿಂಗ್ ನೀತಿಗಳನ್ನು ಸ್ಥಾಪಿಸಿದ ನಂತರ ನಗರದ ಇತರ ಭಾಗಗಳಲ್ಲೂ ಟೋಯಿಂಗ್ ಕಾರ್ಯ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com