
ಬೆಂಗಳೂರು: ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ, ಕಾಮಗಾರಿಗಳ ಸ್ಥಗಿತಗೊಳಿಸಿ ಬಿಬಿಎಂಪಿ ಗುತ್ತಿಗೆದಾರರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಇದರ ಪರಿಣಾಮ ಇತರೆ ಅಭಿವೃದ್ಧಿ ಕಾರ್ಯಗಳ ಮೇಲೆ ಬಿದ್ದಿದೆ.
2,500ಕ್ಕೂ ಹೆಚ್ಚು ರಸ್ತೆ ಗುಂಡಿಗಳ ದುರಸ್ತಿ ನಡೆಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಗಡುವು ನೀಡಿದ್ದು, ಮುಷ್ಕರವು ಈ ಕಾರ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಗುತ್ತಿಗೆದಾರರ ಸಂಘ ಹೇಳಿದೆ.
ಇದರ ಜೊತೆಗೆ 1,800 ಕೋಟಿ ರೂಪಾಯಿ ವೆಚ್ಚದ ಎಲ್ಲಾ ಪ್ರಮುಖ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಮತ್ತು ಮಳೆನೀರು ಚರಂಡಿ ಕಾಮಗಾರಿ ಕಾರ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಅವರು ಮಾತನಾಡಿ, ಬುಧವಾರ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ಗುತ್ತಿಗೆದಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಒಂದು ದಿನದ ಧರಣಿಗೆ ಪೊಲೀಸರ ಅನುಮತಿ ಪಡೆದಿದ್ದೇವೆ, ಫ್ರೀಡಂಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ, ನಂತರ ಕಸದ ಗುತ್ತಿಗೆದಾರರನ್ನೂ ನಮ್ಮೊಂದಿಗೆ ಸೇರಿಸಿಕೊಳ್ಳುತ್ತೇವೆ, ನಮ್ಮ ಹಕ್ಕಿನ ಹಣಕ್ಕೆ ಮಾತ್ರ ಬೇಡಿಕೆ ಇಡುತ್ತಿದ್ದೇವೆ, ಡಿಸಿಎಂ ಆದೇಶದ ಹೊರತಾಗಿಯೂ ಬಿಬಿಎಂಪಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರರು ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಸಿದ್ಧತೆಗಳಿಗೂ ತೊಡಕಾಗಲಿದೆ. ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್‌ಗಳು ಮತ್ತು ಸಿಬ್ಬಂದಿಗಳ ನಿಯೋಜನೆಗೂ ಹೊಡೆತ ಬೀಳಲಿದೆ ಎಂದು ಹೇಳಿದ್ದಾರೆ.
ಮತ್ತೋರ್ವ ಗುತ್ತಿಗೆದಾರ ನಂದಕುಮಾರ್ ಮಾತನಾಡಿ, ಬಿಬಿಎಂಪಿ ಗುತ್ತಿಗೆದಾರರಿಗೆ ಅಧಿಕಾರಕ್ಕೆ ಬಂದ ಹಲವು ಸರ್ಕಾರಗಳು ಪಾವತಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾಲದ ಮೇಲಿನ ಬಡ್ಡಿ ಮತ್ತು ಬ್ಯಾಂಕ್‌ಗಳಿಂದ ನೋಟಿಸ್‌ಗಳಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
Advertisement