ಹುಬ್ಬಳ್ಳಿ: ಸುಲಿಗೆ ಯತ್ನ ಪ್ರಕರಣದಲ್ಲಿ ನಟೋರಿಯಸ್ ಕ್ರಿಮಿನಲ್ ಬಚ್ಚಾಖಾನ್ ಮತ್ತು ಇತರ ಏಳು ಮಂದಿ ಸಹಚರರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಬುಧವಾರ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಸ್ಥಳಾಂತರಿಸಿದ ಬಳ್ಳಾರಿ ಜೈಲಿನಲ್ಲಿದ್ದ ನಟೋರಿಯಸ್ ಕ್ರಿಮಿನಲ್ ಬಚ್ಚಾಖಾನ್ ಪೆರೋಲ್ ಮೇಲೆ ಹೊರಗಿದ್ದು, ಇದೀಗ ಆತನನ್ನು ಬೆಂಗಳೂರಿನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 45 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ಬಚ್ಚಾ ಖಾನ್ ಸೇರಿದಂತೆ 8 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪ್ರದೇಶದ ಮಂಟೂರು ಗ್ರಾಮದ 70 ವರ್ಷದ ವ್ಯಕ್ತಿಯೊಬ್ಬರಿಗೆ ಆಗಸ್ಟ್ 18 ಮತ್ತು 20 ರ ನಡುವೆ ಎರಡು ಬಾರಿ ಫೋನ್ ಮಾಡಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಚ್ಚಾಖಾನ್ ಹಾಗೂ ಆತನ ಗ್ಯಾಂಗ್ ಹತ್ಯೆ ಬೆದರಿಕೆ ಹಾಕಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ 2020ರಲ್ಲಿ ಫ್ರೂಟ್ ಇರ್ಫಾನ್ ಎಂಬುವವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೌಡಿಗೆ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಜೈಲು ಸೇರಿದ್ದ ಈತ ಪೆರೋಲ್ ಮೇಲೆ ಹೊರಗಿದ್ದ. ಇದೀಗ ಮತ್ತೆ ಕೊಲೆ ಬೆದರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ.
Advertisement