ಬೆಂಗಳೂರು: ಸೆಪ್ಟೆಂಬರ್ 15ರೊಳಗೆ ನಗರದ ಎಲ್ಲಾ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿರಬೇಕು. ಇಲ್ಲದಿದ್ದರೆ ಆ್ಯಕ್ಷನ್ ಗ್ಯಾರಂಟಿ ಎಂದು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಹಿರಿಯ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದ್ಯತೆ ಮೇರೆಗೆ ಎಲ್ಲ ವಾರ್ಡ್‌ಗಳಲ್ಲಿ ಗುಂಡಿಗಳನ್ನು ತುಂಬುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಳಿದ ಕಾಮಗಾರಿಗಳನ್ನು ಬದಿಗೊತ್ತಿ ನಗರದಲ್ಲಿ ಗುಂಡಿಗಳು ಬಾರದಂತೆ ಕಾಮಗಾರಿಗಳ ಕೈಗೊಳ್ಳುವಂತೆ ಸೂಚಿಸಲಾಗಿದೆ. ನಗರದ ರಸ್ತೆಗಳನ್ನು ಗುಂಡಿ ಮುಕ್ತ ಮಾಡಲು ವಾರ್ಡ್ ಮಟ್ಟದ ಎಲ್ಲಾ ಅಧಿಕಾರಿಗಳು, ಅವರ ಶ್ರೇಣಿಯನ್ನು ಲೆಕ್ಕಿಸದೆ, ಕೆಲಸಕ್ಕಿಳಿದು ಕಾಮಗಾರಿಗಳ ಮೇಲ್ವಿಚಾರಣೆ ಮಾಡಬೇಕು. ಸಾರ್ವಜನಿಕರಿಂದ ದೂರುಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇತ್ತೀಚೆಗಷ್ಟೇ ಮರ ಬಿದ್ದು ಇಬ್ಬರು ಆಟೋ ಚಾಲಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಮರ ಬೀಳದಂತೆ ಕ್ರಮ ವಹಿಸುವಂತೆಯೂ ಸೂಚಿಸಲಾಗಿದೆ.
ಸೆಪ್ಟೆಂಬರ್‌ನಲ್ಲಿ ಹಠಾತ್ ಮಳೆಯಾಗುವ ನಿರೀಕ್ಷೆಯಿರುವುದರಿಂದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವ ಮತ್ತು ಕೆಲವು ಪ್ರದೇಶಗಳಲ್ಲಿ ಜಲಾವೃತವಾಗುವ ಸಾಧ್ಯತೆಗಳಿವೆ. ಈ ಕುರಿತು ಕ್ರಮಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಗಾಂಧಿ ಜಯಂತಿಯಂದು ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಿ ಬೃಹತ್ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಲಾಗುವುದು. ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಾಗಿ ಪ್ರತಿಜ್ಞೆ ಮಾಡಲಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಸೆ.1ರಂದು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಡಿಸಿಎಂ, ಗುಂಡಿಗಳನ್ನು ತುಂಬಿಸಲು 15 ದಿನಗಳ ಗಡುವು ನೀಡಿದ್ದರು.
Advertisement