ಬೆಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ಬಾಯಿಮುಚ್ಚಿ ಎಳೆದೊಯ್ಯಲು ಯತ್ನಿಸಿದ ಕಾಮುಕನನ್ನು ಬೆತ್ತಲೆಗೊಳಿಸಿದ ಸ್ಥಳೀಯರು ಥಳಸಿರುವ ಘಟನೆಯೊಂದು ಬನ್ನೇರುಘಟ್ಟ ಸಮೀಪದ ಕಲ್ಕೆರೆ ಕಾಲೋನಿ ಬಳಿ ಭಾನುವಾರ ನಡೆದಿದೆ.
ಧಾರವಾಡ ಮೂಲದ ರವಿಕುಮಾರ್ ಆರೋಪಿ ಎಂದು ಗುರುತಿಸಲಾಗಿದ್ದು, ಆತನನ್ನು ಬನ್ನೇರುಘಟ್ಟ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ರವಿಕುಮಾರ್, ಕಲ್ಕೆರೆ ಗ್ರಾಮದ ಹೋಟೆಲ್‍ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಯಾವುದೋ ಕೆಲಸ ನಿಮಿತ್ತ ಮನೆಯಿಂದ ಹೊರಗೆ ಬಂದಿದ್ದ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಬಳಿಕ ಮಹಿಳೆಯ ಬಾಯಿಮುಚ್ಚಿ ಎಳೆದೊಯ್ಯಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕೂಗಿದ್ದು, ಸ್ಥಳದಲ್ಲಿದ್ದವರು ನೆರವಿಗೆ ಬಂದಿದ್ದಾರೆ.
ಬಳಿಕ ರವಿಕುಮಾರ್ ನನ್ನು ವಿವಸ್ತ್ರಗೊಳಿಸಿ, ಥಳಿಸಿದ್ದಾರೆ. ಘಟನೆಯಲ್ಲಿ ರವಿಕುಮಾರ್'ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇದೀಗ ಮಹಿಳೆ ಕುಮಾರ್ ವಿರುದ್ಧ ದೂರು ದಾಖಲಿಸಿದ್ದು, ಬಿಎನ್‌ಎಸ್‌ನ ಸೆಕ್ಷನ್ 74 ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಏತನ್ಮಧ್ಯೆ, ಕುಮಾರ್ ಸ್ಥಳೀಯ ನಿವಾಸಿಗಳ ವಿರುದ್ಧವೂ ದೂರು ದಾಖಲಿಸಿದ್ದಾರೆ. BNS ನ ಸೆಕ್ಷನ್ 133 (ವ್ಯಕ್ತಿ ಅವಮಾನಿಸುವ ಉದ್ದೇಶದಿಂದ ಹಲ್ಲೆ ), 118 (ಇನ್ನೊಬ್ಬ ವ್ಯಕ್ತಿಗೆ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಅವರು ಮಾತನಾಡಿ, ಕಾನೂನು ಕೈಗೆತ್ತಿಗೊಂಡ ಹಿನ್ನೆಲೆಯಲ್ಲಿ ಐವರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬನ್ನೇರುಘಟ್ಟ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
Advertisement