
ಬೆಂಗಳೂರು: ನಗರದ ದಕ್ಷಿಣ ವಲಯದಲ್ಲಿ 438 ರಸ್ತೆ ಗುಂಡಿಗಳ ಪೈಕಿ 379 ರಸ್ತೆ ಗುಂಡಿಗಳ ಮುಚ್ಚಲಾಗಿದ್ದು, ಉಳಿದ ಗುಂಡಿಗಳಿಗೆ ಶೀಘ್ರದಲ್ಲೇ ಮುಕ್ತಿ ನೀಡಲಾಗುವುದು ಎಂದು ವಲಯ ಆಯುಕ್ತೆ ವಿನೋತ್ ಪ್ರಿಯಾ ಅವರು ಹೇಳಿದ್ದಾರೆ.
ಬಿಟಿಎಂ ಲೇಔಟ್ 2ನೇ ಹಂತದಲ್ಲಿ ರಸ್ತೆ ಗುಂಡಿ ದುರಸ್ತಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದಕ್ಷಿಣ ವಲಯದ ಗುಂಡಿಗಳನ್ನು ಸರಿಪಡಿಸಲು ಆಯಾ ಇಲಾಖೆಗಳ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದ್ದು, ಅವರ ವ್ಯಾಪ್ತಿಯಲ್ಲಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
'ರಸ್ತೆ ಗುಂಡಿ ಗಮನ’ ತಂತ್ರಾಂಶದಲ್ಲಿ ಏಪ್ರಿಲ್ 2024 ರಿಂದ 438 ದೂರುಗಳು ಬಂದಿದ್ದು, ಈಗಾಗಲೇ 379 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 59 ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲಾಗುವುದು. ‘ಇಶ್ಯೂ ತಂತ್ರಾಂಶ’ದಲ್ಲಿ 750 ದೂರುಗಳ ಪೈಕಿ 599 ದೂರುಗಳನ್ನು ಬಗೆಹರಿಸಲಾಗಿದೆ. ಸಹಾಯ 2.0 ಬಂದಿರುವ ಎಲ್ಲಾ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ನಾಗರಿಕರಿಂದ ಬರುವ ದೂರುಗಳು ಮಾತ್ರವಲ್ಲದೆ ಎಂಜಿನಿಯರ್‌ಗಳು ಕೂಡ ರಸ್ತೆ ಗುಂಡಿಗಳನ್ನು ಗುರುತಿಸಿ, ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ದಕ್ಷಿಣ ವಲಯ ವ್ಯಾಪ್ತಿಯ ರಾಜಕಾಲುವೆಯಲ್ಲಿ ಹೂಳೆತ್ತುವ, ಕಟ್ಟಡ ಭಗ್ನಾವಶೇಷಗಳ ತೆರವು, ಮುರಿದಿರುವ ಸ್ಲ್ಯಾಬ್‌ಗಳ ತೆರವು, ಕಸ ಸುರಿಯುವ ಸ್ಥಳ, ನೀರು ನಿಲ್ಲುವ ಸ್ಥಳ, ರಸ್ತೆ ಗುಂಡಿ ಸೇರಿದಂತೆ ಇನ್ನಿತರೆ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ‘ಇಶ್ಯೂ ತಂತ್ರಾಂಶ’ ಸಿದ್ದಪಡಿಸಿಕೊಂಡಿದ್ದು, ಅದರ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟು 1,746 ಕಿ.ಮೀ ಉದ್ದದ ರಸ್ತೆಯಿದೆ. ಸಂಪೂರ್ಣ ಹಾಳಾಗಿದ್ದ 75.30 ಕಿ.ಮೀ ಉದ್ದದ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
Advertisement