ಡಿಕೆಶಿ ಸೂಚನೆ ಬೆನ್ನಲ್ಲೇ ಎಚ್ಚೆತ್ತ BBMP: ತ್ಯಾಜ್ಯ, ರಸ್ತೆ ಗುಂಡಿ ಸಮಸ್ಯೆ ಪರಿಹಾರಕ್ಕೆ ಪ್ರತಿ ವಾರ್ಡ್'ಗೆ ನೋಡಲ್ ಅಧಿಕಾರಿಗಳ ನೇಮಕ!

ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗಿರುವ ರಸ್ತೆಗುಂಡಿಗಳ ದುರಸ್ತಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿದೆ ಎಂಬುದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳಾರ ರಾತ್ರಿ ಪರಿಶೀಲನೆ ನಡೆಸಿದರು.
ರಸ್ತೆ ಗುಂಡಿ
ರಸ್ತೆ ಗುಂಡಿ
Updated on

ಬೆಂಗಳೂರು: ರಸ್ತೆ ಗುಂಡಿ ಮುಚ್ಚುವ ಸಂಬಂಧ ರಾಜ್ಯ ಸರ್ಕಾರ ಗಡುವು ನೀಡಿರುವ ಬೆನ್ನಲ್ಲೇ ಸಮಸ್ಯೆ ಸರಿಪಡಿಸುವ ಸಲುವಾಗಿ ಬೆಂಗಳೂರು ಮಹಾನಗರ ಪಾಲಿಕೆ ನಗರದ ಪ್ರತೀ ವಾರ್ಡ್'ನಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗಿರುವ ರಸ್ತೆಗುಂಡಿಗಳ ದುರಸ್ತಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿದೆ ಎಂಬುದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳಾರ ರಾತ್ರಿ ಪರಿಶೀಲನೆ ನಡೆಸಿದರು.

ಹೆಬ್ಬಾಳ ಬಳಿಯ ಎಸ್ಟಿಮ್ ಮಾಲ್​​ನಿಂದ ಪರಿಶೀಲನೆ ಆರಂಭಿಸಿದ ಅವರು ಹೆಬ್ಬಾಳ ಜಂಕ್ಷನ್, ವೀರಣ್ಣನಪಾಳ್ಯ, ನಾಗವಾರ, ಎಚ್‌ಬಿಆರ್ ಲೇಔಟ್, ಹೆಣ್ಣೂರು ಸೇರಿ ಪೂರ್ವ ವಲಯದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.

ಈ ಎಲ್ಲ ಪ್ರದೇಶಗಳಲ್ಲಿ ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿರುವ ಕಾರಣ ಬಿಎಂಆರ್‌ಸಿಎಲ್‌ನ ಎಂಡಿ ಮಹೇಶ್ವರ ರಾವ್ ಅವರೊಂದಿಗೆ ಕಾಮಗಾರಿಗಳನ್ನು ಪರಿಶೀಲಿಸಿದರು.

ಮೆಟ್ರೋ ಕಾಮಗಾರಿಯಿಂದ ನಾಗರಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸುರಕ್ಷತೆ ಜತೆಗೆ ಕೆಲಸ ಮುಗಿದ ಬೆನ್ನಲ್ಲೇ ರಸ್ತೆಗಳಿಗೆ ಡಾಂಬರು ಹಾಕಬೇಕು ಎಂದು ಸೂಚಿಸಿದರು.

ರಸ್ತೆ ಗುಂಡಿ
ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಕಮಿಷನರ್ ಗೆ 15 ದಿನಗಳ ಗಡುವು!

ಎಸ್ಟೀಮ್ ಮಾಲ್‌ನಿಂದ ಕೆಆರ್‌ಪುರಂ ಕಡೆಗೆ ಹೋಗುವ ರಸ್ತೆ ಅಶುಚಿತ್ವದಿಂದ ಕೂಡಿದ್ದು, ನಿರ್ವಹಣೆ ಮಾಡದೇ ಇರುವುದರಿಂದ ಕೂಡಲೇ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವಾರ್ಡ್‌ನಲ್ಲಿ ಸಹಾಯಕ ಎಂಜಿನಿಯರ್‌ಗಳನ್ನು (ಎಇ) ನೋಡಲ್ ಅಧಿಕಾರಿಗಳನ್ನಾಗಿ ಮಾಡಲಾಗಿದೆ. ಈ ಅಧಿಕಾರಿಗಳು ರಸ್ತೆ ಗುಂಡಿಗಳ ಸಮಸ್ಯೆಯನ್ನು ಪರಿಹರಿಸುವುದು, ಸ್ವಚ್ಛತೆ, ಒಎಫ್‌ಸಿಗಳ ತೆರವು, ನೀರಿನ ಸಮಸ್ಯೆ ಇತ್ಯಾದಿಗಳನ್ನು ಪರಿಶೀಲಿಸುತ್ತಾರೆಂದು ಹೇಳಿದರು.

ನಗರದ ವಿವಿಧೆಡೆ ಕಳೆದ ಏಪ್ರಿಲ್‌ನಿಂದ ಈವರೆಗೆ ಮುಖ್ಯ ರಸ್ತೆಗಳಲ್ಲಿ 4 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ 2 ಸಾವಿರ ಗುಂಡಿ ಮುಚ್ಚಬೇಕಿದ್ದು, ಅವುಗಳನ್ನು ವಾರದೊಳಗೆ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ವಾಡ್‌ಗಳಲ್ಲೂ 1,600 ಗುಂಡಿಗಳನ್ನು ಗುರುತಿಸಲಾಗಿದೆ. ಇದರ ಹೊರತಾಗಿಯೂ ಸಣ್ಣ ಗುಂಡಿಗಳು 2-3 ಜಾಸ್ತಿ ಇರಬಹುದು. ಅವುಗಳನ್ನು ಕಾಲಮಿತಿಯೊಳಗೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಆಯ್ದ ಪ್ರಮುಖ ರಸ್ತೆಗಳಲ್ಲಿ 660 ಕೋಟಿ ರೂ. ವೆಚ್ಚದ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆದಿದೆ. ಇದರಿಂದ ಇಂತಹ 459 ಕಿ.ಮೀ. ರಸ್ತೆ ಸುಧಾರಣೆಗೊಂಡಲ್ಲಿ ರಸ್ತೆಗುಂಡಿ ಸಮಸ್ಯೆಗೆ ಹೆಚ್ಚಿನ ಪರಿಹಾರ ಸಿಗಲಿದೆ. ಬೇಗನೆ ಟೆಂಡರ್ ಕರೆದು ಮುಂದಿನ ಜನವರಿ ತಿಂಗಳಾಂತ್ಯಕ್ಕೆ ಉತ್ತಮ ರಸ್ತೆಗಳನ್ನಾಗಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com