ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಹಾಗೂ ಗಲಭೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಜೊತೆಗೆ ಗಣೇಶ ಮೂರ್ತಿಯನ್ನು ಕೊಂಡೊಯ್ದ ಪೊಲೀಸರ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಮಂಡ್ಯ ಗಲಭೆ ಖಂಡಿಸಿ ಸಂಘಪರಿವಾರದ ಕಾರ್ಯಕರ್ತರು ಶುಕ್ರವಾರ ನಗರ ಟೌನ್ ಹಾಲ್ ಬಳಿ ಗಣೇಶ ಮೂರ್ತಿ ಸಹಿತಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಗೆ ತಡೆಯೊಡ್ಡಿದ ಪೊಲೀಸರು ಪ್ರತಿಭಟನಾಕಾರರು ಹಾಗೂ ಗಣೇಶ ಮೂರ್ತಿಯನ್ನೂ ವಶಕ್ಕೆ ಪಡೆದರು. ಬಳಿಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದರು.
ಪೊಲೀಸ್ ವಾಹನದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸರು ಕೊಂಡೊಯ್ಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫೋಟೋ ವೈರಲ್ ಆಗಿದೆ.
ಕಾಂಗ್ರೆಸ್‌ನ ಹಿಂದೂ ಭಾವನೆಗಳ ಸಂಪೂರ್ಣ ತಿರಸ್ಕಾರ ಭಯಾನಕ ಎನಿಸುತ್ತಿದೆ. ಕರ್ನಾಟಕದಲ್ಲಿ ಪೊಲೀಸ್ ವಾಹನದಲ್ಲಿ ಗಣೇಶನ ಮೂರ್ತಿಯನ್ನು ಕೊಂಡೊಯ್ಯುತ್ತಿರುವ ಚಿತ್ರವು ಕಾಂಗ್ರೆಸ್ ನಾಯಕರ ಅಗೌರವ ಮತ್ತು ದ್ವೇಷವನ್ನು ತೋರಿಸುತ್ತಿದೆ. ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಈ ರೀತಿಯ ಅಗೌರವ ತೋರುವುದನ್ನು ಅಭ್ಯಾಸ ಮಾಡಿಕೊಂಡಿವೆ. ಅವರು ಹಿಂದೂ ನಂಬಿಕೆಯನ್ನು ಅವಮಾನಿಸುತ್ತಿದ್ದು, ನಮ್ಮ ದೇವರಿಗೆ ಅಗೌರವಗೊಳಿಸುತ್ತಿದ್ದಾರೆಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕಿಡಿಕಾರಿದ್ದಾರೆ.
ಕೋಟ್ಯಂತರ ಭಾರತೀಯರ ಹೆಮ್ಮೆ ಮತ್ತು ಭಕ್ತಿಯನ್ನು ಗಣಪತಿಯು ಸಾಕಾರಗೊಳಿಸಿದ್ದಾನೆ. ಈ ಅವಮಾನ ಪ್ರತಿಯೊಬ್ಬ ಹಿಂದೂವಿನ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿ ಮೂರ್ತಿಯ ಪಾವಿತ್ರ್ಯತೆ ಕಾಪಾಡಬಹುದಿತ್ತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಗಣೇಶನ ಮೂರ್ತಿಯನ್ನೂ ವಶಕ್ಕೆ ಪಡೆದು, ಪ್ರತಿಭಟನಾಕಾರರೊಂದಿಗೆ ಪೊಲೀಸ್ ವಾಹನದಲ್ಲಿ ಕೊಂಡೊಯ್ಯಲಾಗಿದೆ. ಈ ಘಟನೆಯು ಹಿಂದೂ ಸಮಾಜದ ಬಗ್ಗೆ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರ ಕೂಡಲೇ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ
Advertisement