ಬೆಂಗಳೂರು: ವ್ಯಾಪಾರದಲ್ಲಿ ನಷ್ಟ, ಸಾಲ ತೀರಿಸಲು 50 ಲ್ಯಾಪ್‌ಟಾಪ್ ಕಳ್ಳತನ, ವ್ಯಕ್ತಿಯ ಬಂಧನ

ವೈಟ್‌ಫೀಲ್ಡ್‌ನಲ್ಲಿ ತಾನು ಉದ್ಯೋಗದಲ್ಲಿದ್ದ ಕಂಪನಿಯಿಂದ ಲ್ಯಾಪ್‌ಟಾಪ್‌ ಕದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ತಮಿಳುನಾಡಿನ ಹೊಸೂರಿನ ಬಿಸಿಎ ಪದವೀಧರ ಎಂ. ಮುರುಗೇಶ್ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಸಾಲ ತೀರಿಸಲು ಸುಮಾರು 22 ಲಕ್ಷ ರೂ. ಮೌಲ್ಯದ 50 ಕಂಪನಿ ಲ್ಯಾಪ್‌ಟಾಪ್‌ಗಳನ್ನು ಕದ್ದ ಆರೋಪದ ಮೇಲೆ ಮಲ್ಟಿಮೀಡಿಯಾ ಸಂಸ್ಥೆಯಲ್ಲಿ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡುತ್ತಿದ್ದ 29 ವರ್ಷದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೊಮ್ಯಾಟೋ ಕೃಷಿ, ಸೈಬರ್ ಸೆಂಟರ್ ವ್ಯವಹಾರದಿಂದ 25 ಲಕ್ಷ ರೂ. ನಷ್ಟ ಅನುಭವಿಸಿರುವುದಾಗಿ ಬಂಧಿತ ಆರೋಪಿ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ. ವ್ಯಾಪಾರದಲ್ಲಿನ ನಷ್ಟದಿಂದ ಸಾಲದ ಸುಳಿಗೆ ಸಿಲುಕಿ ಅದರಿಂದ ಹೊರಬರಲು ವೈಟ್‌ಫೀಲ್ಡ್‌ನಲ್ಲಿ ತಾನು ಉದ್ಯೋಗದಲ್ಲಿದ್ದ ಕಂಪನಿಯಿಂದ ಲ್ಯಾಪ್‌ಟಾಪ್‌ ಕದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ತಮಿಳುನಾಡಿನ ಹೊಸೂರಿನ ಬಿಸಿಎ ಪದವೀಧರ ಎಂ. ಮುರುಗೇಶ್ ಎಂದು ಗುರುತಿಸಲಾಗಿದೆ.

ಆಗಾಗ್ಗೆ ಲ್ಯಾಪ್ ಟಾಪ್ ಕದ್ದು, ಹೊಸೂರಿನ ಗ್ಯಾಜೆಟ್‌ಗಳ ರಿಪೇರಿ ಅಂಗಡಿಗೆ ಮಾರಾಟ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಆಗಸ್ಟ್ 22 ರಿಂದ ಇದ್ದಕ್ಕಿದ್ದಂತೆ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದು, ಲ್ಯಾಪ್ ಟಾಪ್ ನಾಪತ್ತೆ ಕುರಿತು ಕಂಪನಿ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿ ಕಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ. ಕಂಪನಿಯಿಂದ ದೂರು ಸ್ವೀಕರಿಸಿದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಹೊಸೂರಿನ ಚಿತ್ರಮಂದಿರದಿಂದ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಟಿವಿ-ಡಿಶ್‌ ರಿಪೇರಿ ನೆಪದಲ್ಲಿ ಕಳ್ಳತನ: ಆರೋಪಿ ಬಂಧನ, 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

ಬಂಧನದ ವೇಳೆ ಆತನಿಂದ ಐದು ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 45 ಲ್ಯಾಪ್‌ಟಾಪ್‌ಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕಳುವಾದ ಲ್ಯಾಪ್‌ಟಾಪ್‌ಗಳ ಮೌಲ್ಯ 22 ಲಕ್ಷ ರೂ. ಎಂದು ಹೇಳಲಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com