ಬೆಂಗಳೂರು: ವಿಜಯನಗರದ ಪಾಲಿಕೆ ಬಜಾರ್ ನಲ್ಲಿ ಬಿಬಿಎಂಪಿ ಅಧಿಕಾರಿಗಳು ನಡೆಸಿದ ಅತಿಕ್ರಮಣ ಕಾರ್ಯಾಚರಣೆ ವೇಳೆ 50 ಮಂದಿ ಮಾರಾಟಗಾರರನ್ನು ತೆರವುಗೊಳಿಸಲಾಗಿದೆ.
ಆದರೆ, ಪಾಲಿಕೆ ಕಾರ್ಯಾಚರಣೆ ಕುರಿತು ಕೆಲ ಆರೋಪಗಳು ಕೇಳಿ ಬಂದಿದ್ದು, ಕಾಂಗ್ರೆಸ ಪರವಾಗಿದ್ದ ಮಾರಾಟಗಾರರಿಗೆ ಅಂಗಡಿಗಳ ಬೀಗ ನೀಡಲಾಗಿದ್ದು, ವರ್ಷಗಳಿಂದ ಮಾರಾಟ ಮಾಡುತ್ತಿದ್ದವರಿದೆ ಪ್ರವೇಶ ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ.
ಪಾಲಿಕೆ ಬಜಾರ್‌ನಲ್ಲಿರುವ 79 ಅಂಗಡಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಬೇಕಾಗಿತ್ತು, ಆದರೆ,. ಇದನ್ನು ಅನುಸರಿಸಲಾಗಿಲ್ಲ ಎಂದು ವಕೀಲ ಮತ್ತು ಕಾರ್ಯಕರ್ತ ವಿನಯ್ ಶ್ರೀನಿವಾಸ್ ಅವರು ಆರೋಪಿಸಿದ್ದಾರೆ.
ಈಗಾಗಲೇ ನಾವು ನ್ಯಾಯಾಲಯದ ಮೊರೆ ಹೋಗಲಾಗಿದ್ದು, ವ್ಯಾಪಾರಿಗಳ ವಿರುದ್ದ ಕ್ರಮ ಕೈಗೊಳ್ಳದಂತೆ ತಡೆಯಾಜ್ಞೆ ನೀಡಿದೆ ಎಂದು ಹೇಳಿದ್ದಾರೆ.
ಪಟ್ಟಣ ಮಾರಾಟ ಸಮಿತಿ ಸದಸ್ಯೆ ಶಶಿಕಲಾ ಮಾತನಾಡಿ, ಪಾಲಿಕೆ ಬಜಾರ್ ಬಳಿ ತರಕಾರಿ, ಹೂವು, ಬಟ್ಟೆ ಮತ್ತಿತರ ವಸ್ತುಗಳ ಮಾರಾಟ ಮಾಡುವ ಮೂಲಕ ಅನೇಕ ಮಾರಾಟಗಾರರು, ವಿಧವೆಯರು ಮತ್ತು ಒಂಟಿ ಮಹಿಳೆಯರು ಜೀವನ ಸಾಗಿಸುತ್ತಿದ್ದಾರೆ. ನಾನು ವಿಜಯನಗರದಲ್ಲಿ ಕಳೆದ 32 ವರ್ಷಗಳಿಂದ ಸರಕುಗಳನ್ನು ಮಾರಾಟ ಮಾಡುತ್ತಿದ್ದೇನೆ. ನನ್ನಂತೆ ಸುಮಾರು 130 ಮಾರಾಟಗಾರರಿದ್ದಾರೆ ಮತ್ತು ಅವರಲ್ಲಿ ಸುಮಾರು 50 ಮಂದಿಯನ್ನು ಹೊರಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಯನಿರ್ವಾಹಕ ಎಂಜಿನಿಯರ್ ಜೈಶಂಕರ್ ಅವರು ಮಾತನಾಡಿ, ಫುಟ್‌ಪಾತ್‌ಗಳಲ್ಲಿ ಪಾದಚಾರಿ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಕಾಯಿದೆ 2020 ರ ಅಡಿಯಲ್ಲಿ 60 ಪ್ರತಿಶತದಷ್ಟು 'ಅತಿಕ್ರಮಣ'ಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಪಾಲಿಕೆ ಕಾರ್ಯಾಚರಣೆ ವಿರುದ್ಧ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದೇಶ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.
Advertisement