ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳ ತುಂಬಿಸುವ ಗಡುವು ಸೆಪ್ಟೆಂಬರ್ 16ಕ್ಕೆ ಮುಕ್ತಾಯವಾಗಿದ್ದರು ಕೂಡ ನಗರದಲ್ಲಿ ಕೆಲ ಭಾಗದಲ್ಲಿ ಗುಂಡಿಗಳ ದುರಸ್ತಿಯಾಗದ ಬಗ್ಗೆ ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್ ದಾಸ್ ಪೈ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆ ಗುಂಡಿ ಕುರಿತು ಈ ಹಿಂದೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಬೆಂಗಳೂರಿನ ರಸ್ತೆ ಗುಂಡಿಗಳನ್ನು 15 ದಿನಗಳಲ್ಲಿ ತುಂಬಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಆದರೆ, ತನ್ನ ಜೇಬು ತುಂಬಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದರು.
ಈ ಟ್ವೀಟ್ ನ್ನು ರೀಟ್ವೀಟ್ ಮಾಡಿರುವ ಮೋಹನ್ ದಾಸ್ ಪೈ ಅವರು. ಡಿಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಗುಂಡಿಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿ ನಂತರ ರಜೆಯ ಮೇಲೆ ಅಮೇರಿಕಾಕ್ಕೆ ಹೋಗಿದ್ದಿರಿ. ನಾವು ಈ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವುದನ್ನು ಮುಂದುವರೆಸಿದ್ದೇವೆ. ಗುಂಡಿ ಮುಚ್ಚುವುದಾಗಿ ಹೇಳಿದ್ದ ನಿಮ್ಮ ಭರವಸೆ ಏನಾಯಿತು? ಜನತೆ ನಿಮ್ಮ ಮಾತನ್ನು ಇನ್ನಾದರೂ ನಂಬಬಹುದೇ? ಬೆಂಗಳೂರಿನ ಸಚಿವರಾಗಿ ತೀವ್ರ ವಿಫಲರಾಗುತ್ತಿದ್ದೀರಿ. ನಾವು ನಿಮ್ಮನ್ನು ನಂಬಿದ್ದೇವೆ, ನೀವು ನಮ್ಮ ಜೀವನವನ್ನು ಸುಧಾರಿಸುತ್ತೀರಿ ಎಂದು ಭಾವಿಸಿದ್ದೇವೆಂದು ಹೇಳಿದ್ದಾರೆ.
ನಗರದ ರಸ್ತೆ ಗುಂಡಿಗಳ ಕುರಿತು ಹಲವು ದೂರುಗಳು ಬರುತ್ತಿದ್ದು, 15 ದಿನಗಳಲ್ಲಿ ನಗರದ ಎಲ್ಲ ಗುಂಡಿಗಳನ್ನು ತುಂಬಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಡಿಕೆ.ಶಿವಕುಮಾರ್ ಅವರು ಸೆ.1ರಂದು ಸೂಚಿಸಿದ್ದರು. ಅಲ್ಲದೆ, ಗಡುವು ಮುಗಿದ ನಂತರ ನಗರದ ರಸ್ತೆಗಳನ್ನು ಪರಿಶೀಲಿಸುವುದಾಗಿ ಹಾಗೂ ಕಾಮಗಾರಿ ಅಪೂರ್ಣವಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಎಚ್ಚರಿಕೆ ಬೆನ್ನಲ್ಲೇ ಪಾಲಿಕೆ ಎಲ್ಲಾ ಎಂಟು ವಲಯಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಆದರೆ, ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಇದರಿಂದಾಗಿ ನಾಗರಿಕರು ನಿರಾಶೆಗೊಂಡಿದ್ದಾರೆ.
Advertisement