ಬೀದಿ ನಾಯಿಗಳ ಅಕ್ರಮಣಶೀಲತೆ ತಗ್ಗಿಸಲು ಕ್ರಮ: ಆಹಾರ ವ್ಯವಸ್ಥೆಗೆ ಹೊಸ ಯೋಜನೆ: BBMP
ಬೆಂಗಳೂರು: ಆಹಾರಕ್ಕಾಗಿ ಜನರ ಮೇಲೆ ದಾಳಿ ಮಾಡುತ್ತಿರುವ ಬೀದಿನಾಯಿಗಳ ಆಕ್ರಮಣಶೀಲತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಬೀದಿ ನಾಯಿ ಆಹಾರ ವ್ಯವಸ್ಥೆಗೆ ಹೊಸ ಯೋಜನೆ ರೂಪಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.
ಬೀದಿ ನಾಯಿಗಳಿಗೆ ಆಹಾರ ಸಿಗದಂತಹ ಪ್ರದೇಶಗಳಲ್ಲಿ ‘ಆಹಾರ ವ್ಯವಸ್ಥೆ’ ಮಾಡುವುದಕ್ಕಾಗಿ ಹೊಸ ಯೋಜನೆಯನ್ನು ಬಿಬಿಎಂಪಿ ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಿದ್ದು, ಇದರಿಂದ ಬೀದಿ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ನಗರದಲ್ಲಿ ಅನೇಕ ಸ್ಥಳಗಳಲ್ಲಿ ಸಮುದಾಯ ಪ್ರಾಣಿಗಳಿಗೆ ದಿನಕ್ಕೆ ಒಂದು ಹೊತ್ತಿನ ಆಹಾರವೂ ಸಿಗದಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಬೀದಿ ನಾಯಿಗಳು ಸಾರ್ವಜನಿಕರಿಗೆ ಕಚ್ಚುವ ಪ್ರಕರಣಗಳು ಇತ್ತೀಚೆಗೆ ಹೆಚ್ಚು ದಾಖಲಾಗುತ್ತಿದ್ದು, ಅದನ್ನು ನಿಯಂತ್ರಿಸಬೇಕಿದೆ. ಆದ್ದರಿಂದ ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡಲು ಪಾಲಿಕೆಯು ಪ್ರಾಣಿ ಪಾಲಕರು, ಪೌರಕಾರ್ಮಿಕರು, ಹೋಟೆಲ್ ಮಾಲೀಕರು, ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಇತರೆ ಆಸಕ್ತರೊಂದಿಗೆ ಸಮನ್ವಯ ಸಾಧಿಸಿ ‘ಆಹಾರ ವ್ಯವಸ್ಥೆ’ ಮಾಡಲಿದೆ ಎಂದು ಬಿಬಿಎಂಪಿ ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
‘ಪ್ರಾಣಿಗಳಿಗೆ ಆಹಾರ ನೀಡುವ ಪ್ರಾಣಿಪ್ರಿಯರ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ನಂತರ ಪೌರ ಕಾರ್ಮಿಕರು ಮತ್ತು ಖಾಸಗಿ ಹೋಟೆಲ್ ಮಾಲೀಕರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಆಹಾರ ನೀಡುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡಲಾಗುವುದು. ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಆಯ್ದ ಸ್ಥಳಗಳಲ್ಲಿ ಅನುಷ್ಟಾನಗೊಳಿಸಿ, ಎಲ್ಲಾ ಭಾಗಿದಾರರ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗುವುದು. ಯೋಜನೆ ಯಶಸ್ವಿಯಾದಲ್ಲಿ ಎಲ್ಲ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಈ ಅಭಿಯಾನವನ್ನು ಅನುಷ್ಟಾನಗೊಳಿಸಲಾಗುವುದು’ ಎಂದು ಹೇಳಿದ್ದಾರೆ.
ಪ್ರಾಣಿಗಳ ಸಂರಕ್ಷಣೆ ಹಾಗೂ ಶಸ್ತ್ರಚಿಕಿತ್ಸಾ ನಂತರದ ಆರೈಕೆ, ವೈದ್ಯಕೀಯ ಮೇಲ್ವಿಚಾರಣೆಗೆ ಪ್ರತ್ಯೇಕ ವಲಯಗಳಲ್ಲಿ ರಕ್ಷಣೆ ಮತ್ತು ಚೇತರಿಸಿಕೊಳ್ಳುವಿಕೆಯ ಸೌಲಭ್ಯವನ್ನು ಪಾಲಿಕೆ ನಿರ್ಮಿಸುತ್ತಿದೆ. ಯೋಜನೆಯ ಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.