
ಬೆಂಗಳೂರು: ದಿನ ಕಳೆದಂತೆ ನಗರದಲ್ಲಿ ಅನಧಿಕೃತ ಬ್ಯಾನರ್-ಫ್ಲೆಕ್ಸ್ ಗಳ ಹಾವಳಿ ಹೆಚ್ಚಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ಮಾರ್ಗಸೂಚಿಯಲ್ಲಿ ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 158 ರಂತೆ ಪಾಲಿಕೆಯ ವ್ಯಾಪ್ತಿಯಲ್ಲಿನ ಯಾವುದೇ ಕಟ್ಟಡ ಅಥವಾ ಭೂಮಿ ಅಥವಾ ರಚನೆ ಅಥವಾ ಗೋಡೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ಆಯುಕ್ತರ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 158 ರಂತೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಸಲ್ಲಿಸದೇ ಹೊರತು ಯಾವುದೇ ಜಾಹೀರಾತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಮುದ್ರಣವನ್ನು ಮುದ್ರಿಸದಂತೆ ವಲಯ ಆಯುಕ್ತರುಗಳು ಈಗಾಗಲೇ ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 307 ರನ್ವಯ ವ್ಯಾಪಾರ ಪರವಾನಗಿಯ ನಿಯಮಗಳು ಮತ್ತು ಷರತ್ತುಗಳನ್ನು ಸೂಚಿಸಿ ಆದೇಶವನ್ನು ಹೊರಡಿಸಿರುತ್ತಾರೆ. ಬೆಂಗಳೂರು ನಗರದಲ್ಲಿ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ ಹಿಂದೆ ಉಲ್ಲೇಖ(1) ರಲ್ಲಿ ಹೊರಡಿಸಲಾಗಿದ್ದ ಪ್ರಮಾಣಿತ ಕಾರ್ಯಚರಣಾ ವಿಧಾನ (SoP) ಅನ್ನು ಹಿಂಪಡೆದು ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನ (SoP) ಅನ್ನು ಈ ಕೆಳಗಿನಂತೆ ಹೊರಡಿಸಲಾಗಿದೆ.
ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ / ಅಳವಡಿಸುವ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳನ್ನು ತೆರುವಗೊಳಿಸಲು, ಮಾರ್ಷಲ್ಸ್ ಮತ್ತು ಪ್ರಹರಿಯವರ ಸಹಯೋಗದೊಂದಿಗೆ ಕಿರಿಯ ಅಭಿಯಂತರರು / ಸಹಾಯಕ ಅಭಿಯಂತರರು / ಸಹಾಯಕ ಕಾರ್ಯಪಾಲಕ ಅಭಿಯಂತರರುಗಳ ತಂಡಗಳನ್ನು (ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡ) ವಲಯ ಆಯುಕ್ತರು ರಚಿಸಬೇಕು.
ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಕಟೌಟ್ ಹಾಗೂ ಇನ್ನಿತರೆ ಜಾಹೀರಾತುಗಳನ್ನು ತೆಗೆದುಹಾಕುವ ಹಾಗೂ ಅನಧಿಕೃತವಾಗಿ ಅಳವಡಿಸಲಾಗಿರುವವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ(ಎಫ್ಐಆರ್) ದಾಖಲಿಸುವ ಹಾಗೂ ದಂಡ ವಿಧಿಸುವ ಕಾರ್ಯದ ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ರವರಿಗೆ ನೀಡಲಾಗಿದೆ.
ವಾರ್ಡ್ನ ಕಿರಿಯ / ಸಹಾಯಕ ಅಭಿಯಂತರರುಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಅಳವಡಸಿರುವವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್ಐಆರ್) ನೋಂದಣಿಗಾಗಿ ದೂರು ದಾಖಲಿಸುವುದು. ಯಾವುದಾದರೂ ವಾರ್ಡ್ನಲ್ಲಿ ಕಿರಿಯ / ಸಹಾಯಕ ಅಭಿಯಂತರರ ಹುದ್ದೆ ಖಾಲಿಯಿದ್ದಲ್ಲಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಹೊರಗುತ್ತಿಗೆ ಕಿರಿಯ / ಸಹಾಯಕ ಅಭಿಯಂತರ ಮುಖೇನಾ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳನ್ನು ತೆಗೆದುಹಾಕಲು ಕ್ರಮ ವಹಿಸುವುದು ಹಾಗೂ ಸಂಬಂಧಪಟ್ಟ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ದೂರಿನೊಂದಿಗೆ ಪ್ರಥಮ ವರ್ತಮಾನ ವರದಿ (ಎಫ್ಐಆರ್) ನೋಂದಾಯಿಸಿ ಕ್ರಮ ಕೈಗೊಳ್ಳಬೇಕು.
ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನದ ಬಗ್ಗೆ ದೂರುಗಳನ್ನು ಸ್ವೀಕರಿಸಲು ಸಹಾಯಕ ಕಾರ್ಯಪಾಲಕ ಅಭಿಯಂತರವರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆಯಬೇಕು.
ಬಿಬಿಎಂಪಿ ಜಾಹೀರಾತು ನಿಂಯತ್ರಣ ತಂಡವು ಸಂಬಂಧಪಟ್ಟ ಪೊಲೀಸ್ ಠಾಣೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆಯನ್ನು ಪೊಲೀಸ್ ಠಾಣೆಗೆ ನೀಡಬೇಕು.
ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ / ಅಳವಡಿಸುವ ಅನಧಿಕೃತ ಫ್ಲೇಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತು ಪ್ರದರ್ಶನಗಳ ಬಗ್ಗೆ ಸಹಾಯ ಆಪ್ (1533) ಮೂಲಕ ಅಥವಾ ಸ್ಥಳೀಯ ನಿಯಂತ್ರಣ ಕೊಠಡಿಯ ಮೂಲಕ ಸ್ವೀಕರಿಸಿದ ದೂರುಗಳನ್ನು ತಕ್ಷಣವೇ ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸೂಚನೆ ನೀಡಿದೆ.
Advertisement